ಕುಸ್ತಿ ಕ್ರೀಡಾಳುಗಳಾದ ವಿನೇಶ್ ಫೋಗಾಟ್ ಹಾಗು ಸೋಮ್ವೀರ್ ರಾಠಿಯವರ ಮದುವೆ ಡಿಸೆಂಬರ್ನಲ್ಲಿ?

Share this story


೨೦೧೮ ರ ದ್ವಿತೀಯಾರ್ಧದಲ್ಲಿ ಸೆಲೆಬ್ರಿಟಿ ಮದುವೆಗಳದ್ದೇ ಸುದ್ದಿ. ಈಗ ಬಿಟ್ಟರೆ ಸದ್ಯಕ್ಕೆ ಒಳ್ಳೆಯ ಮುಹೂರ್ತವಿಲ್ಲವೇನೊ ಎಂಬಂತೆ ನಾ ಮುಂದು ತಾ ಮುಂದು ಎಂದು ಒಬ್ಬೊಬ್ಬರಾಗಿ ಹಸೆಮಣೆ ಏರುತ್ತಿದ್ದಾರೆ. ಹಾಸ್ಯ ಕಲಾವಿದ ಕಪಿಲ್ ಶರ್ಮ, ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹವಾಲ್ ಸಹ ಇನ್ನೇನು ತಮ್ಮ ತಮ್ಮ ಬಾಳ ಸಂಗಾತಿಯ ಜೊತೆ ಸಪ್ತಪದಿ ತುಳಿಯಲಿದ್ದಾರೆ. ಇತ್ತೀಚೆಗಷ್ಟೆ ಮದುವೆಯಾದ ರಣ್ವೀರ್ ಸಿಂಗ್-ದೀಪಿಕ ಪಡುಕೋಣೆ ಹಾಗು ಪ್ರಿಯಾಂಕ ಚೋಪ್ರ-ನಿಕ್ ಜೋನಸ್ ಜೋಡಿಯ ಸಂಭ್ರಮದ ನೆನಪು ಹಸಿಯಾಗಿರುವಾಗಲೇ ಮತ್ತೊಬ್ಬ ಸೆಲೆಬ್ರಿಟಿಯ ಮದುವೆ ಸುದ್ದಿ ಹೊರ ಬಿದ್ದಿದೆ. ನಮ್ಮ ಹೆಮ್ಮೆಯ ಮಹಿಳಾ ಕುಸ್ತಿ ಪಟು ವಿನೇಶ್ ಫೋಗಾಟ್ ತಮ್ಮ ಬಹು ಕಾಲದ ಗೆಳೆಯ ಸೋಮ್ವೀರ್ ರಾಠಿಯನ್ನು ಸದ್ಯದಲ್ಲೇ ಮದುವೆಯಾಗುತ್ತಿದ್ದಾರೆ.

ವರದಿಗಳ ಪ್ರಕಾರ, ಬಹಳ ಕಾಲದವರೆಗು ತಮ್ಮ ಪ್ರೇಮವನ್ನು ಗುಟ್ಟಾಗಿ ಇಟ್ಟಿದ್ದ ಈ ಜೋಡಿಯು, ಈಗ ಮುಂದೆ ಬಂದು ಸಾಮಾಜಿಕ ಜಾಲತಾಣವಾದ ಇನ್ಸ್ಟಗ್ರಾಂ ನಲ್ಲಿ, ತಮ್ಮಿಬ್ಬರ ಜೊತೆಯಾಗಿರುವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ವರದಿಗಳು ನಿಜವಾದ ಪಕ್ಷದಲ್ಲಿ, ಈ ಜೋಡಿಯು ಡಿಸೆಂಬರ್ ೧೩ ರಂದು ಹೊಸ ಬಾಳಿಗೆ ಮುಂದಡಿಯಿಟ್ಟು, ಮರುದಿನ ಭವ್ಯವಾದ ಆರತಕ್ಷತೆ ಏರ್ಪಡಿಸಲಿದ್ದಾರೆ. ಮದುವೆಯು ಹರಿಯಾಣದ ಚರ್ಖಿ ದಾದ್ರಿ ಜಿಲ್ಲೆಯ ಬಳಲಿ ಎಂಬ ಗ್ರಾಮದಲ್ಲಿ ಜರುಗಲಿದೆ. ಡಿಸೆಂಬರ್ ೨ ರಂದು ವಿನೇಶ್ ರವರು ಭಾರತದ ಕುಸ್ತಿ ಒಕ್ಕೂಟದ ಅಧ್ಯಕ್ಷರಾದ ಬ್ರಿಜ್ ಭೂಷಣ್ ಶರಣ್ ಸಿಂಗ್ ರನ್ನು ಭೇಟಿ ಮಾಡಿ ಮದುವೆ ಆಮಂತ್ರಣ ಪತ್ರಿಕೆಯನ್ನು ನೀಡಿದರು.

ಇವರಿಬ್ಬರ ನಿಶ್ಚಿತಾರ್ಥವು ಬಹಳ ಸಿನಿಮೀಯ ರೀತಿಯಲ್ಲಿ ನಡೆಯಿತು. ವಿನೇಶ್ ರವರು ಇಂಡೋನೇಷ್ಯಾದ ಜಕಾರ್ತದಲ್ಲಿ ಆಗಸ್ಟ್ ನಲ್ಲಿ ನಡೆದ ೨೦೧೮ರ ಏಷ್ಯನ್ ಕ್ರೀಡಾಕೂಟದಲ್ಲಿ, ೫೦ ಕೆಜಿ ಫ್ರೀಸ್ಟೈಲ್ ಕುಸ್ತಿ ವಿಭಾಗದಲ್ಲಿ ಹೊನ್ನಿನ ಪದಕ ಗೆದ್ದು ಭಾರತಕ್ಕೆ ಮರಳುತ್ತಿದ್ದರು. ಅವರು, ಈ ವಿಭಾಗದಲ್ಲಿ ಹೊನ್ನಿನ ಪದಕ ಗೆದ್ದ ಮೊದಲ ಭಾರತೀಯ ಮಹಿಳೆಯಾಗಿದ್ದಾರೆ. ದೆಹಲಿಯ ಇಂದಿರಾ ಗಾಂಧಿ ವಿಮಾನ ನಿಲ್ದಾಣದಲ್ಲಿ ಇಳಿದ ತುಸು ಹೊತ್ತಿನಲ್ಲೇ ಇಬ್ಬರೂ ಉಂಗುರ ಬದಲಾಯಿಸಿಕೊಂಡು, ಮದುವೆ ಸುದ್ದಿಯನ್ನು ಖಾತ್ರಿ ಪಡಿಸಿದರು.

ವಿನೇಶ್ ಫೋಗಾಟ್ ರವರು, ಕುಸ್ತಿಯಲ್ಲಿ ಬಹಳ ಗೆಲುವನ್ನು ಕಂಡ ಮನೆತನದಿಂದ ಬಂದವರಾಗಿದ್ದಾರೆ. ಅಂತರರಾಷ್ಟ್ರೀಯ ಕುಸ್ತಿಪಟುಗಳಾದ, ಕಾಮನ್ವೆಲ್ತ್ ಕ್ರೀಡಾಕೂಟ ಪದಕ ವಿಜೇತರಾದ ಗೀತಾ ಫೋಗಾಟ್ ಹಾಗು ಬಬಿತ ಕುಮಾರಿ ಬಗ್ಗೆ ಎಲ್ಲರಿಗು ತಿಳಿದಿದೆ. ಆಮಿರ್ ಖಾನ್ ರ ಬಹಳ ಯಶಸ್ವಿ ಹಿಂದಿ ಚಿತ್ರ ದಂಗಲ್, ಈ ಸೋದರಿಯರ ಬಾಳಿನ ಕತೆಯನ್ನು ಒಳಗೊಂಡಿತ್ತು. ಇವರ ತಂದೆ ಮಹಾವೀರ್ ಸಿಂಗ್ ಫೋಗಾಟ್ ಪಾತ್ರದಲ್ಲಿ ಸ್ವಯಂ ಆಮಿರ್ ಖಾನ್ ಮನೋಜ್ಞವಾಗಿ ನಟಿಸಿದ್ದರು. ಮಹಾವೀರ್ ಸಿಂಗ್ ರ ತಮ್ಮನಾದ ರಾಜ್ಪಾಲ್ ರ ಮಗಳೇ ವಿನೇಶ್ ಫೋಗಾಟ್. ಗೀತಾ ಮತ್ತು ಬಬಿತಾರಂತೆಯೇ, ವಿನೇಶ್ ಕೂಡ ಕುಸ್ತಿ ಕ್ರೀಡೆಯಲ್ಲಿ ಯಶಸ್ಸು ಕಾಣಲು ಬಹಳ ಕಷ್ಟ ಪಟ್ಟಿದ್ದಾರೆ.

೨೦೧೩ ರಲ್ಲಿ ದೆಹಲಿಯಲ್ಲಿ ನಡೆದ ಏಷ್ಯನ್ ಕುಸ್ತಿ ಪಂದ್ಯಾವಳಿಯಲ್ಲಿ ವಿನೇಶ್, ಮಹಿಳೆಯರ ೫೨ ಕೆಜಿ ವಿಭಾಗದಲ್ಲಿ ಕಂಚಿನ ಪದಕ ಪಡೆದಿದ್ದರು. ಅದೇ ಏಡಿನಲ್ಲಿ ದಕ್ಷಿಣ ಆಫ್ರಿಕಾದ ಜೊಹಾನಸ್ಬರ್ಗ್ ನಲ್ಲಿ ನಡೆದ ವಿಶೇಷ ಪಂದ್ಯಾವಳಿಯೊಂದರಲ್ಲಿ ೫೧ ಕೆಜಿ ವಿಭಾಗದಲ್ಲಿ ಬೆಳ್ಳಿಯ ಪದಕ ಪಡೆದಿದ್ದರು. ಅಲ್ಲದೆ ೨೦೧೪ ರಲ್ಲಿ ಸ್ಕಾಟ್ಲೆಂಡ್ನ ಗ್ಲಾಸ್ಗೊ ದಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ೪೮ ಕೆಜಿ ವಿಭಾಗದಲ್ಲಿ ಹೊನ್ನಿನ ಪದಕ ಪಡೆದರು. ನಂತರ ದಕ್ಷಿಣ ಕೊರಿಯಾದಲ್ಲಿ ನಡೆದ ಏಷಿಯನ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಪಡೆದರು.

೨೦೧೫ ರಲ್ಲಿ ಕತಾರ್ ನ ದೋಹದಲ್ಲಿ ನಡೆದ ಏಷಿಯನ್ ಚಾಂಪಿಯನ್ಶಿಪ್ಸ್ ನಲ್ಲಿ ವಿನೇಶ್ ಬೆಳ್ಳಿ ಪದಕ ವಿಜೇತರಾದರು. ೨೦೧೬ ರ ರಿಯೊ ಒಲಿಂಪಿಕ್ಸ್ ಗಾಗಿ ಅರ್ಹತೆ ಗಳಿಸಿಕೊಳ್ಳಲು ಟರ್ಕಿ ದೇಶದ ಇಸ್ತಾನ್ಬುಲ್ ನಲ್ಲಿ ಪಂದ್ಯಾವಳಿಯೊಂದು ಜರುಗಿತು. ಅದರ ಕಡೆಯ ಪಂದ್ಯದಲ್ಲಿ ವಿನೇಶ್ ರವರು ಪೋಲೆಂಡ್ ನ ಇವೋನ ಮ್ಯಾಟ್ಕೋವ್ಸ್ಕ ಅವರನ್ನು ಸೋಲಿಸಿ ಒಲಿಂಪಿಕ್ಸ್ ಗೆ ಅರ್ಹತೆ ಗಿಟ್ಟಿಸಿದರು. ೨೦೧೬ ರ ರಿಯೊ ಒಲಿಂಪಿಕ್ಸ್ ನಲ್ಲಿ ವಿನೇಶ್ ಕೊನೆಯ ಎಂಟರ ಹಂತಕ್ಕೆ ತಲುಪಿ, ಮೊಣಕಾಲಿನ ಗಾಯದ ದೆಸೆಯಿಂದ ಚೀನಾದ ಸುನ್ ಯಾನನ್ ಎದುರು ಸೋಲು ಕಾಣಬೇಕಾಯಿತು. ೨೦೧೮ ರಲ್ಲಿ ಆಸ್ಟೇಲಿಯಾದ ಕ್ವೀನ್ಸ್ ಲ್ಯಾಂಡ್ ನ ಗೋಲ್ಡ್ ಕೋಸ್ಟ್ ನಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ೫೦ ಕೆಜಿ ವಿಭಾಗದಲ್ಲಿ ಹೊನ್ನಿನ ಪದಕ ಗೆದ್ದಿರುವರು.

ವಿನೇಶ್ ರ ಬಾಳ ಸಂಗಾತಿಯಾಗಲಿರುವ ಸೋಮ್ವೀರ್ ಸಹ ದೇಶ ಮೆಚ್ಚುವ ಕುಸ್ತಿ ಕ್ರೀಡಾಳು ಆಗಿದ್ದಾರೆ. ಇವರಿಬ್ಬರೂ ಭಾರತಕ್ಕೆ ಮತ್ತಷ್ಟು ಪದಕಗಳನ್ನು ತಂದುಕೊಡಲಿ. ಮುಂಬಾಳ ಪಯಣಕ್ಕೆ ಅಡಿಯಿಡುತ್ತಿರುವ ಈ ಜೋಡಿಗೆ ನಲಿವಾಗಲಿ, ಇವರೀರ್ವರು ಮುಟ್ಟಿದ್ದೆಲ್ಲ ಹೊನ್ನಾಗಿ ಬಾಳು ಜೇನಾಗಲಿ.