ಕಾಲ್ಚೆಂಡಾಟ ಭಾರತದಲ್ಲಿ ಏಕೆ ಜನಪ್ರಿಯವಾಗಿಲ್ಲ?

Share this story






ಕಾಲ್ಚೆಂಡಾಟ – ಪ್ರಪಂಚದಾದ್ಯಂತ ಕೋಟಿ ಕೋಟಿ ಜನ ಹುಚ್ಚೆದ್ದು ಆಡುವ, ನೋಡುವ, ಆರಾಧಿಸುವ ಆಟ. ಅದೆಷ್ಟೋ ಜನರಿಗೆ ಫುಟ್ಬಾಲ್ ಆಟವೇ ಒಂದು ಧರ್ಮವಿದ್ದಂತೆ. ಈ ಆಟವು ಜಗತ್ತಿನ ಅತ್ಯಂತ ಜನಪ್ರಿಯ ಕ್ರೀಡೆಯಾಗಿದ್ದರೂ, ಭಾರತದಲ್ಲಿ ಮಾತ್ರ ಪಶ್ಚಿಮ ಬಂಗಾಳ, ಗೋವ ಮತ್ತು ಈಶಾನ್ಯ ರಾಜ್ಯಗಳನ್ನು ಹೊರತುಪಡಿಸಿ ಬೇರೆಲ್ಲೂ ಕವಡೆ ಕಾಸಿನ ಕಿಮ್ಮತ್ತೂ ಗಳಿಸಿಲ್ಲ. ಹಾಗೆಂದ ಮಾತ್ರಕ್ಕೆ ಬೇರೆ ರಾಜ್ಯಗಳಲ್ಲಿ ಫುಟ್ಬಾಲ್ ಆಡುವವರು, ನೋಡುವವರು ಇಲ್ಲವೇ ಇಲ್ಲ ಎಂದೇನಿಲ್ಲ. ಅವರ ಸಂಖ್ಯೆ ಕಡಿಮೆಯಿದೆ ಅಷ್ಟೆ. ಅವರಿಗೆ ಸದಾ ಕಾಡುವ ಪ್ರಶ್ನೆ ಏನೆಂದರೆ, “ನಮ್ಮ ದೇಶದಲ್ಲಿ ಯಾಕೆ ಫುಟ್ಬಾಲ್ ಆಟ ಜನಪ್ರಿಯವಾಗಿಲ್ಲ?”. ಇದಕ್ಕೆ ಕಾರಣಗಳನ್ನು ಹಲವು ಜನರು ಹಲವಾರು ಬಾರಿ ಹಲವು ವೇದಿಕೆಗಳಲ್ಲಿ ನೀಡಿ, ಚರ್ಚಿಸಿ ಟೀಕಿಸಿದ್ದೂ ಆಗಿದೆ. ಬಹಳಷ್ಟು ಕ್ರೀಡಾ ಪತ್ರಕರ್ತರು, ಎಲ್ಲಿ ತಪ್ಪು ನಡೆದಿದೆ ಎಂದು ಅವರೇ ಸಂಶೋಧಿಸಿ ಕೆಲವು ತೀರ್ಮಾನಗಳಿಗೆ ಬಂದಿದ್ದಾರೆ. ಇಡೀ ಜಗತ್ತನ್ನೇ ಮೋಡಿ ಮಾಡಿದ ಫುಟ್ಬಾಲ್ ಮಾಯೆ ಭಾರತದಲ್ಲಿ ಮಾತ್ರ ಯಾಕೆ ಮಂಕಾಯಿತು?

ಫಿಫಾ (FIFA) ದ ಮಾಜಿ ಅಧ್ಯಕ್ಷ ಸೆಪ್ ಬ್ಲ್ಯಾಟರ್ ಹಿಂದೊಮ್ಮೆ ಭಾರತವನ್ನು, ಫುಟ್ಬಾಲ್ ವಿಷಯದಲ್ಲಿ ಮಲಗಿರುವ ದೈತ್ಯ ಎಂದು ಕರೆದಿದ್ದರು. ಅವರು ಹೇಳಿದ್ದು ಸರಿಯೇ ಆಗಿದೆ. ವಿದೇಶದ ಬಹಳಷ್ಟು ಕ್ರೀಡಾ ನಿಪುಣರು, ಭಾರತದಂತ ಅಗಾಧ ಜನಸಂಖ್ಯೆ ಇರುವ ದೇಶ ಅಂತರರಾಷ್ಟ್ರೀಯ ವೇದಿಕೆಯಲ್ಲಿ, ಬಹಳ ನೀರಸ ಪ್ರದರ್ಶನ ನೀಡಿದೆ ಎನ್ನುತ್ತಾರೆ. FIFA ವಿಶ್ವ ವರ್ಲ್ಡ್ ಕಪ್ಗೆ ಭಾರತ ಒಂದು ಬಾರಿಯೂ ಅರ್ಹತೆ ಗಳಿಸದಿರುವುದು ಎಲ್ಲ ಭಾರತೀಯರಿಗು ನಾಚಿಕೆಯ ಸಂಗತಿಯಾಗಿದೆ. ಆದರೆ, ಅಖಿಲ ಭಾರತ ಫುಟ್ಬಾಲ್ ಒಕ್ಕೂಟ (AIFF) ಹಿಂದೊಮ್ಮೆ ಮೂರ್ಖತನದ ನಿರ್ಧಾರವೊಂದನ್ನು ತೆಗೆದುಕೊಳ್ಳದೆ ಹೋಗಿದ್ದರೆ, ಇಂದು ಪರಿಸ್ಥಿತಿಯೇ ಬೇರೆಯಾಗಿರುತ್ತಿತ್ತು. ೧೯೫೦ ರ FIFA ವಿಶ್ವ ವರ್ಲ್ಡ್ ಕಪ್ಗೆ ಭಾರತ, ತನ್ನ ಎದುರಾಳಿ ತಂಡಗಳು ಹಿಂದೆ ಸರಿದ ಏಕೈಕ ಕಾರಣಕ್ಕಾಗಿ ಅರ್ಹತೆ ಗಿಟ್ಟಿಸಿಕೊಂಡಿತ್ತು. ಆದರೆ AIFF ಆಗ, FIFA ವಿಶ್ವ ವರ್ಲ್ಡ್ ಕಪ್ ನ ಪ್ರಾಮುಖ್ಯತೆಯನ್ನು ಅರಿತುಕೊಳ್ಳದೆ, ಭಾರತ ತಂಡವನ್ನು ಕಳಿಸದಿರಲು ತೀರ್ಮಾನಿಸಿತು. ಇಂದಿಗೂ ಅದು ಈ ವಿಚಾರವನ್ನು ನೆನೆದು ಕೈ ಕೈ ಹಿಸುಕಿಕೊಳ್ಳುತ್ತಿದೆ. ಪ್ರಸ್ತುತ ಭಾರತವು ಫಿಫಾ ವಿಶ್ವ ರ್ಯಾಂಕಿಂಗ್ ಪಟ್ಟಿಯಲ್ಲಿ ೯೭ನೇ ಜಾಗದಲ್ಲಿದೆ.

ಫುಟ್ಬಾಲ್ ಆಟವು ಭಾರತದಲ್ಲಿ ಅಸಡ್ಡೆಗೊಳಗಾಗಲು ಅತಿ ದೊಡ್ಡ ಕಾರಣವೇನೆಂದರೆ, ಕ್ರಿಕೆಟ್ನ ಸಾಟಿಯಿಲ್ಲದ ಜನಪ್ರಿಯತೆ. ಇಲ್ಲಿ ಕ್ರಿಕೆಟನ್ನು ಧರ್ಮವೆಂದೂ, ಕ್ರಿಕೆಟ್ ಆಟಗಾರರನ್ನು ದೇವರೆಂದೂ ನೋಡುವ ಹುಚ್ಚು ಅಭಿಮಾನಿಗಳಿದ್ದಾರೆ. ಇಂದು ಕ್ರಿಕೆಟ್ನಲ್ಲಿ ಭಾರತ ವಿಶ್ವದಲ್ಲೇ ಅಗ್ರಗಣ್ಯ ಸ್ಥಾನದಲ್ಲಿದೆ. ಆದರೆ ದುರಂತವೆಂದರೆ, ಭಾರತೀಯ ಫುಟ್ಬಾಲ್ ತಂಡವು ೧೯೬೨ ರ ಏಷಿಯನ್ ಕ್ರೀಡಾಕೂಟದಲ್ಲಿ ಹೊನ್ನಿನ ಪದಕ ಗೆದ್ದದ್ದು ಬಿಟ್ಟರೆ, ಅಲ್ಲಿಂದೀಚೆಗೆ ಹೇಳಿಕೊಳ್ಳುವ ಯಾವ ಸಾಧನೆಯನ್ನೂ ಮಾಡಿಲ್ಲ. ಭಾರತ ಫುಟ್ಬಾಲ್ ತಂಡವು, ಕ್ರಿಕೆಟ್ನಂತೆ ಅಸಂಖ್ಯ ಅಭಿಮಾನಿಗಳನ್ನು ಪಡೆಯಲೇ ಇಲ್ಲ. ಸ್ಥಿರವಾಗಿ ಕಳಪೆ ಪ್ರದರ್ಶನ ನೀಡುತ್ತಿರುವುದೇ ಇದಕ್ಕೆ ಕಾರಣ. ಅದೇ ಯುರೋಪಿಯನ್ ಕ್ಲಬ್ಗಳಾದ ಬಾರ್ಸಿಲೋನ, ರಿಯಲ್ ಮೆಡ್ರಿಡ್, ಮ್ಯಾಂಚೆಸ್ಟರ್ ಯುನೈಟೆಡ್ ಗಳಿಗೆ ಭಾರತದ ಪುಟ್ಟ ಪುಟ್ಟ ಹಳ್ಳಿಗಳಲ್ಲೂ ಅಭಿಮಾನಿಗಳಿದ್ದಾರೆ. ಏಕೆಂದರೆ, ಈ ಕ್ಲಬ್ಗಳು ಅತ್ಯುತ್ತಮ ಆಟ ಆಡುತ್ತ ಕಪ್ ಗಳನ್ನು ಗೆಲ್ಲುತ್ತಾ ಬಂದಿವೆ. ಅಲ್ಲದೆ ಭಾರತೀಯ ಫುಟ್ಬಾಲ್ ನ ಗುಣಮಟ್ಟವೂ ಕಳಪೆಯಾಗಿರುವುದು ಜನರು ಇದರತ್ತ ಮುಖ ಮಾಡದಿರಲು ಮತ್ತೊಂದು ಪ್ರಬಲ ಕಾರಣವಾಗಿದೆ. ಹಣಕಾಸಿನ ನೆರವು ಹಾಗು ಮೂಲಭೂತ ಸೌಕರ್ಯಗಳ ಕೊರತೆ ಕೂಡ ಇನ್ನೊಂದು ಕಾರಣವಾಗಿದೆ. ಪೂರ್ವ ಬಂಗಾಳ ಹಾಗು ಮೋಹನ್ ಬಗಾನ್ ತಂಡಗಳ ನಡುವಿನ ಪಂದ್ಯಕ್ಕೆ ಸ್ಥಳೀಯವಾಗಿ ಸಿಗುವ ಜನಪ್ರಿಯತೆ ಇಡೀ ದೇಶಾದ್ಯಂತ ಸಿಗುವುದಿಲ್ಲ.

ಇತ್ತೀಚೆಗೆ ಶುರುವಾಗಿರುವ ಇಂಡಿಯನ್ ಸೂಪರ್ ಲೀಗ್ (ISL) ನಂತಹ ಪಂದ್ಯಾವಳಿಗಳು ಒಂದು ಹೊಸ ಭರವಸೆ ಮೂಡಿಸಿದೆ. ಇವು ಗಮನಾರ್ಹ ಬಂಡವಾಳ ಹಾಗು ಜನಪ್ರಿಯತೆಯನ್ನೂ ಗಿಟ್ಟಿಸಿಕೊಳ್ಳುತ್ತಿವೆ. ಕ್ರಿಕೆಟ್ ಅಕಾಡೆಮಿಗಳಂತೆ ವಿಶ್ವ ದರ್ಜೆಯ ಫುಟ್ಬಾಲ್ ಅಕಾಡೆಮಿಗಳನ್ನು ಸ್ಥಾಪಿಸಿ, ಬೇರು ಮಟ್ಟದಿಂದಲೇ ಮಕ್ಕಳಿಗೆ ಫುಟ್ಬಾಲನ್ನು ವೃತ್ತಿಯಾಗಿ ತೆಗೆದುಕೊಳ್ಳಲು ಪ್ರೋತ್ಸಾಹಿಸುವುದು ಈ ಹೊತ್ತಿನ ತುರ್ತು ಅಗತ್ಯವಾಗಿದೆ. ಭಾರತವು ಮೆಸ್ಸಿ ರೊನಾಲ್ಡೊ ರಂತಹ ದೈತ್ಯ ಪ್ರತಿಭೆಗಳನ್ನು ತಯಾರು ಮಾಡಬಲ್ಲುದೇ? ಕಾಲವೇ ಉತ್ತರಿಸಬೇಕು. ಅಲ್ಲಿಯವರೆಗೆ, ಮೆಸ್ಸಿ, ರೊನಾಲ್ಡೊರ ಆಟ ಆನಂದಿಸುತ್ತ, ಮುಂದೊಂದು ದಿನ ಭಾರತೀಯ ಫುಟ್ಬಾಲರ್ ಒಬ್ಬ ಅವರಂತೆಯೇ ಆಡಿ ನಮ್ಮ ದೇಶಕ್ಕೆ ಕೀರ್ತಿ ತಂದಾನು ಎಂದು ಆಶಿಸೋಣ.