ನವದೆಹಲಿಯಲ್ಲಿ ಶನಿವಾರ ನಡೆದ ವಿಶ್ವ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಐತಿಹಾಸಿಕ 6ನೇ ಬಾರಿ ಚಿನ್ನದ ಪದಕ ಮುಡಿಗೇರಿಸಿಕೊಂಡ ಭಾರತದ ಶ್ರೇಷ್ಠ ಬಾಕ್ಸರ್ ಮೇರಿ ಕೋಮ್ ಅದ್ವಿತೀಯ ಸಾಧನೆ ಮಾಡಿದ್ದಾರೆ. ಎರಡು ಮಕ್ಕಳ ತಾಯಿಯಾಗಿರುವ ಕೋಮ್ ಈವರೆಗೂ ಯಾವುದೇ ಮಹಿಳಾ ಬಾಕ್ಸರ್ ಸಾಧಿಸದೆ ಇರುವುದನ್ನು ಮಾಡಿ ತೋರಿಸಿ ಜಗದ್ವಿಖ್ಯಾತಿ ಗಳಿಸಿದ್ದಾರೆ.
48 ಕೆಜಿ ವಿಭಾಗದ ಅಂತಿಮ ಪಂದ್ಯದಲ್ಲಿ ಉಕ್ರೇನ್ನ ಹನ್ನಾ ಒಖೋಟಾ ಅವರನ್ನು 5-0 ನೇರ ಪಾಯಿಂಟ್ಗಳಿಂದ ಸೋಲಿಸಿದ ಮೇರಿ ಕೋಮ್ ಐತಿಹಾಸಿಕ ಗೆಲುವು ಸಾಧಿಸಿದರು. ಗೆಲುವಿನ ನಂತರ ಮಾಧ್ಯಮಗಳೊಂದಿಗೆ ಖುಷಿ ಹಂಚಿಕೊಂಡ ಕೋಮ್ ಈ ಗೆಲುವನ್ನು ನನ್ನ ದೇಶಕ್ಕೆ ಸಮರ್ಪಿಸುತ್ತಿದ್ದೇನೆ. ಎಂದು ಹೆಮ್ಮೆಯಿಂದ ಹೇಳಿದಾಗ ಇಡೀ ದೇಶ ಒಂದು ಕ್ಷಣ ಪುಳಕಿತಗೊಂಡಿತು.
ಆದರೆ ಇಂಥದೊಂದು ಇತಿಹಾಸ ಸೃಷ್ಟಿಸಲು ಮೇರಿ ಕೋಮ್ ಪಟ್ಟ ಕಷ್ಟವೆಷ್ಟು ಎಂಬುದನ್ನು ತಿಳಿದರೆ ಅಚ್ಚರಿಯಾಗುತ್ತದೆ. ಇಲ್ಲಿಯವರೆಗೆ ಅವರ ಸಾಧನೆಯ ಹಾದಿ ಸುಲಭದ್ದೇನೂ ಆಗಿರಲಿಲ್ಲ.
ಒಲಿಂಪಿಕ್ನಲ್ಲಿ ಕಂಚಿನ ಪದಕ ವಿಜೇತೆಯಾಗಿರುವ ಕೋಮ್ 6ನೇ ಚಿನ್ನದ ಪದಕ ಗೆದ್ದ ದಿನ ಅವರ 36ನೇ ಜನ್ಮದಿನವೂ ಆಗಿತ್ತು ಎಂಬುದು ಮತ್ತೂ ವಿಶೇಷವಾಗಿದೆ. ವಿಶ್ವ ಬಾಕ್ಸಿಂಗ್ ಚಾಂಪಿಯನ್ ಆದ ನಂತರ ತ್ರಿವರ್ಣವನ್ನು ಮೈಗೆ ಸುತ್ತಿಕೊಂಡು ಸಂಭ್ರಮಿಸಿದ ಕೋಮ್, ಇವತ್ತು ನಾನು ಅತ್ಯಂತ ಭಾವುಕಳಾಗಿದ್ದೇನೆ. ಒಲಿಂಪಿಕ್ನಲ್ಲಿ 48 ಕೆಜಿ ವಿಭಾಗ ಇಲ್ಲ. ಆದರೆ ನಿಮ್ಮೆಲ್ಲ ಪ್ರೋತ್ಸಾಹ ಹಾಗೂ ಆಶೀರ್ವಾದದಿಂದ ಈ ಸಾಧನೆ ಮಾಡಿದ್ದೇನೆ. ಇನ್ನು ನಿಮ್ಮ ಪ್ರೋತ್ಸಾಹದಿಂದ 2020ರ ಟೋಕಿಯೊ ಒಲಿಂಪಿಕ್ಸ್ಗೆ ಅರ್ಹತೆ ಗಳಿಸುವುದು ನನ್ನ ಗುರಿಯಾಗಿದೆ. 4 ವರ್ಷಗಳ ಹಿಂದೆ ರಿಯೊ ಒಲಿಂಪಿಕ್ಸ್ನಲ್ಲಿ ಸ್ಥಾನ ಗಳಿಸಲು ಆಗದಿರುವುದು ಇನ್ನೂ ಬಾಧಿಸುತ್ತದೆ ಎಂದು ಭಾವುಕರಾದರು.
ದಾಖಲೆಗಳ ಸರಣಿ: ಈಗ ವಿಶ್ವ ಚಾಂಪಿಯನ್ ಆಗಿರುವ ಮೇರಿ ಕೋಮ್ ಒಟ್ಟು ಎರಡು ವಿಶ್ವ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ವಿಶ್ವ ಚಾಂಪಿಯನ್ಶಿಪ್ನಲ್ಲಿ 6 ಚಿನ್ನದ ಪದಕ ಗಳಿಸಿದ ಪ್ರಥಮ ಮಹಿಳಾ ಬಾಕ್ಸರ್ ಹಾಗೂ ಒಟ್ಟು 6 ಚಿನ್ನ ಹಾಗೂ ಒಂದು ಬೆಳ್ಳಿ ಪದಕಗಳೊಂದಿಗೆ ಅತಿ ಹೆಚ್ಚು ಪದಕ ಗೆದ್ದ ದಾಖಲೆಗಳನ್ನು ಅವರು ನಿರ್ಮಿಸಿದ್ದಾರೆ.
ಶನಿವಾರ ಮೇರಿ ಕೋಮ್ರೊಂದಿಗೆ ಸೆಣಸಾಡಿ ಸೋತ ಉಕ್ರೇನ್ನ ಹನ್ನಾ ಒಖೋಟಾ ತೀವ್ರ ಪೈಪೋಟಿಯನ್ನೇ ನೀಡಿದರು. ಇಲ್ಲಿ ಗಮನಿಸಬೇಕಾದ ಮತ್ತೊಂದು ಅಚ್ಚರಿಯ ವಿಷಯ ಏನೆಂದರೆ, 2002 ರಲ್ಲಿ ಟರ್ಕಿಯ ಅಂಟಾಲಿಯಾದಲ್ಲಿ ನಡೆದ ವಿಶ್ವ ಚಾಂಪಿಯನ್ಶಿಪ್ನಲ್ಲಿ ಕೋಮ್ ಚಿನ್ನ ಗೆದ್ದಿದ್ದರು. ಆಗ ಹನ್ನಾ ಒಖೋಟಾ ಅವರು ಕೇವಲ 6 ವರ್ಷ ವಯಸ್ಸಿನವರಾಗಿದ್ದರು. ಈಗ 22 ವರ್ಷದ ಹನ್ನಾ ಒಖೋಟಾ ವಿರುದ್ಧ 36 ವರ್ಷ ವಯಸ್ಸಿನ ಕೋಮ್ ಗೆಲುವು ಸಾಧಿಸಿದ್ದಾರೆ.
ಮೇರಿ ಕೋಮ್ ಜೀವನದ ಬಗ್ಗೆ ಕೆಲ ಆಸಕ್ತಿದಾಯಕ ಸಂಗತಿಗಳನ್ನು ತಿಳಿದುಕೊಳ್ಳುವುದು ಅಗತ್ಯ.
ಬಾಕ್ಸಿಂಗ್ ಆಡುವ ಸಲುವಾಗಿಯೇ 7ನೇ ತರಗತಿಗೆ ಶಾಲೆ ಬಿಟ್ಟಿದ್ದರು ಕೋಮ್. ನಂತರ ಖಾಸಗಿಯಾಗಿ ಪರೀಕ್ಷೆ ಬರೆದು ಪದವಿ ಪಾಸು ಮಾಡಿದರು.
ಬಡತನದ ಜೀವನ ಕಳೆದ ಕೋಮ್ ಯಾವತ್ತೂ ಶ್ರೀಮಂತ ಬಾಕ್ಸರ್ ಆಟಗಾರರು ಸೇವಿಸುವ ಪೌಷ್ಟಿಕಾಂಶದ ಆಹಾರಗಳನ್ನು ಸೇವಿಸಲು ಸಾಧ್ಯವಾಗಲೇ ಇಲ್ಲ.
2 ಮಕ್ಕಳ ತಾಯಿಯಾಗಿರುವ ಕೋಮ್ ಅವರು ಅರ್ಜುನ ಪ್ರಶಸ್ತಿ ಹಾಗೂ ಪದ್ಮಶ್ರೀ ಪ್ರಶಸ್ತಿಗಳು ಸೇರಿದಂತೆ ಹಲವಾರು ಗೌರವಗಳನ್ನು ಪಡೆದುಕೊಂಡಿದ್ದಾರೆ. ಅಲ್ಲದೆ ರಸ್ತೆಯೊಂದಕ್ಕೆ ಅವರ ಹೆಸರನ್ನು ಸಹ ನಾಮಕರಣ ಮಾಡಲಾಗಿದೆ.
ಯುವ ಬಾಕ್ಸರ್ಗಳಿಗೆ ತರಬೇತಿ ನೀಡಲು ಎಂಸಿ ಮೇರಿ ಕೋಮ್ ಹೆಸರಿನಲ್ಲಿ ಬಾಕ್ಸಿಂಗ್ ಅಕಾಡೆಮಿ ಸ್ಥಾಪಿಸಿ ಬಾಕ್ಸಿಂಗ್ ಆಟದ ಬೆಳವಣಿಗೆಗೆ ಅವರು ಶ್ರಮಿಸುತ್ತಿದ್ದಾರೆ.
ಬಾಕ್ಸಿಂಗ್ ರಿಂಗ್ನ ರಾಣಿ
ಪ್ರಸಕ್ತ ವಿಶ್ವ ಚಾಂಪಿಯನ್ಷಿಪ್ಗೂ ಮುನ್ನ ಐರ್ಲೆಂಡ್ನ ಬಾಕ್ಸರ್ ಕೇಟಿ ಟೇಲರ್ (5 ಚಿನ್ನ, 1 ಕಂಚು) ಅವರೊಟ್ಟಿಗೆ ಅತ್ಯಂತ ಯಶಸ್ವಿ ಬಾಕ್ಸರ್ ಎಂಬ ದಾಖಲೆಯನ್ನು ಮೇರಿ ಹಂಚಿಕೊಂಡಿದ್ದರು, ಇದೀಗ ತಮ್ಮ ಒಟ್ಟು ಪದಕ ಗಳಿಕೆಯನ್ನು ವಿಸ್ತರಿಸುವ ಮೂಲಕ ಬಾಕ್ಸಿಂಗ್ ರಿಂಗ್ನ ರಾಣಿಯಾಗಿ ಹೊರಹೊಮ್ಮಿದ್ದಾರೆ. 32 ವರ್ಷದ ಕೇಟಿ ಟೇಲರ್ ಅಮೆಚೂರ್ ಬಾಕ್ಸಿಂಗ್ ತೊರೆದು ವೃತ್ತಿಪರ ಬಾಕ್ಸಿಂಗ್ನಲ್ಲಿ ತೊಡಗಿಸಿಕೊಂಡಿದ್ದಾರೆ.
ಆರನೇ ಚಿನ್ನದ ಪದಕದೊಂದಿಗೆ ಮೆಗ್ನಿಫಿಸೆಂಟ್ ಮೇರಿ ಖ್ಯಾತಿಯ ಕೋಮ್, ಕ್ಯೂಬಾದ ಬಾಕ್ಸಿಂಗ್ ತಾರೆ ಫೆಲಿಕ್ಸ್ ಸ್ಯಾವೊನ್ ಅವರ ದಾಖಲೆಯನ್ನು (ಪುರುಷ ಮತ್ತು ಮಹಿಳಾ ವಿಭಾಗದಲ್ಲಿ ಅತ್ಯಂತ ಯಶಸ್ವಿ ಬಾಕ್ಸರ್) ಸರಿಗಟ್ಟಿದ್ದಾರೆ. ಮೂರು ಬಾರಿಯ ಒಲಿಂಪಿಕ್ ಚಾಂಪಿಯನ್ ಸ್ಯಾವೊನ್ 1986-1989 ಅವಧಿಯಲ್ಲಿ ನಡೆದ ವಿಶ್ವ ಚಾಂಪಿಯನ್ಷಿಪ್ಗಳಲ್ಲಿ ಒಟ್ಟಾರೆ 6 ಚಿನ್ನ ಗೆದ್ದಿದ್ದಾರೆ.