Share this story
೩೯ ರ ಪ್ರಾಯದ ಆಮೆಲಿಯನ್ನು ಕಳೆದ ಜೂನ್ ತಿಂಗಳಲ್ಲೇ, ಫ್ರಾನ್ಸ್ ಡೇವಿಸ್ ಕಪ್ ತಂಡದ ಮೊದಲ ಮಹಿಳಾ ಕೋಚ್ ಎಂದು ಆಯ್ಕೆ ಮಾಡಲಾಗಿತ್ತು. ಆದರೆ ಈಗ ಆಕೆ ಯಾವುದೋ ಕಾರಣಕ್ಕೆ ಉಲ್ಟಾ ಹೊಡೆದಿರುವುದನ್ನು ಸ್ವತಃ ಫ್ರೆಂಚ್ ಟೆನ್ನಿಸ್ ಫೆಡರೇಷನ್ ಖಾತ್ರಿ ಪಡಿಸಿದೆ.
ಈ ಹಿಂದೆ ಫ್ರಾನ್ಸ್ ನ ಫೆಡ್ ಕಪ್ ತಂಡದ ನಾಯಕಿಯಾಗಿದ್ದ ಆಮೆಲಿ, ಯಾನಿಕ್ ನೋವ ಅವರಿಂದ ಡೇವಿಸ್ ಕಪ್ ತಂಡದ ನಾಯಕತ್ವ ಪಡೆಯಬೇಕಿತ್ತು. ಮಾಜಿ ಆಟಗಾರ ಯಾನಿಕ್ ನೋವ ಮೂರನೇ ಬಾರಿಗೆ ಡೇವಿಸ್ ಕಪ್ ತಂಡದ ನಾಯಕರಾಗಿದ್ದರು. ಆದರೆ ಕಳೆದ ತಿಂಗಳು ನಡೆದ ಫೈನಲ್ಸ್ ನಲ್ಲಿ, ಕ್ರೊಯೇಷಿಯ ದ ಎದುರು ಫ್ರಾನ್ಸ್ ಸೋಲು ಕಂಡು, ಯಾನಿಕ್ ರಿಗೆ ಭಾರೀ ನಿರಾಸೆ ಉಂಟಾಗಿತ್ತು.
ಆಮೆಲಿ ಅವರು ಲೂಕ ಪೂಯಿಯವರಿಗೆ ತರಬೇತುದಾರಳಾಗಲು ಒಪ್ಪಿರುವುದು ಸಂತಸ ತಂದಿದೆಯೆಂದೂ, ಈ ತೀರ್ಮಾನವು ಫ್ರಾನ್ಸ್ ಆಟಗಾರನೊಬ್ಬನ ಹಿತದಲ್ಲಿರುವುದರಿಂದ, ಇದನ್ನು ಬೆಂಬಲಿಸಿ ಪ್ರೋತ್ಸಾಹಿಸುವುದಾಗಿಯೂ ಫ್ರೆಂಚ್ ಟೆನ್ನಿಸ್ ಫೆಡರೇಷನ್ ತಿಳಿಸಿದೆ. ಅದರ ರಾಷ್ಟ್ರೀಯ ತಾಂತ್ರಿಕ ನಿರ್ದೇಶಕರಾದ ಪಿಯರ್ ಶೆರೆ ಅವರು, ಬೇಗನೆ ಹೊಸ ಡೇವಿಸ್ ಕಪ್ ನಾಯಕರಾಗುವವರನ್ನು ಹುಡುಕುವುದಾಗಿ ತಿಳಿಸಿದ್ದಾರೆ. ಈ ಹೊಸ ನಾಯಕರಿಗೆ, ೨೦೨೦ ರ ಟೋಕ್ಯೊ ಒಲಿಂಪಿಕ್ಸ್ ನಲ್ಲಿ ಪಾಲ್ಗೊಳ್ಳುವ ತಂಡದ ಜವಾಬ್ದಾರಿಯನ್ನೂ ವಹಿಸಲಾಗುವುದು ಎಂದು ಹೇಳಿದ್ದಾರೆ. ಅವರು ಮುಂದುವರಿದು, “ಲೂಕ ಪೂಯಿಗೆ, ಇಮ್ಯಾನುವಲ್ ಪ್ಲಾಂಕ್ ನಂತರ ಕೋಚ್ ಜಾಗ ತುಂಬಲು ಆಮೆಲಿ ಸೂಕ್ತ ವ್ಯಕ್ತಿ. ಇದು ನ್ಯಾಯಯುತವಾಗಿದೆ. ಅವರ ಸಹಭಾಗಿತ್ವ ಫ್ರಾನ್ಸ್ ಗೆ ಹೆಚ್ಚು ಹೆಚ್ಚು ಪ್ರಶಸ್ತಿಗಳನ್ನು ತಂದುಕೊಡಲಿ.” ಎಂದು ಹಾರೈಕೆ ನೀಡಿದ್ದಾರೆ.
೨೦೧೯ ರಿಂದ, ಟೆನ್ನಿಸ್ ಆಟದ ಪ್ರತಿಷ್ಠಿತ ಪಂದ್ಯಾವಳಿಯಾದ, ೧೧೮ ಏಡುಗಳ ಭವ್ಯ ಇತಿಹಾಸವುಳ್ಳ ಡೇವಿಸ್ ಕಪ್ ನಡೆಯುವ ಬಗೆಯನ್ನೇ ಬದಲಾಯಿಸಲಾಗುತ್ತಿದೆ. ಜನವರಿ ತಿಂಗಳಿನಲ್ಲಿ ಶುರುವಾಗಿ ನಿಯಮಿತ ಅಂತರದಲ್ಲಿ ನವೆಂಬರ್ ವರೆಗೆ ನಡೆಯುತ್ತಿದ್ದ ಪಂದ್ಯಾವಳಿಯನ್ನು ಕೇವಲ ಒಂದೇ ವಾರದಲ್ಲಿ ನಡೆಸಲು ಅಂತರರಾಷ್ಟ್ರೀಯ ಟೆನ್ನಿಸ್ ಒಕ್ಕೂಟ (ITF) ತೀರ್ಮಾನಿಸಿದೆ. ಇದಕ್ಕೆ ಸ್ಪೈನ್ ನ ಕಾಸ್ಮೊಸ್ ಸಂಸ್ಥೆ ೩ ಬಿಲಿಯನ್ ಡಾಲರ್ಗಳಷ್ಟು ಬಂಡವಾಳ ಹೂಡುತ್ತಿದೆ; ೨೫ ಏಡುಗಳ ಒಪ್ಪಂದವಾಗಿದೆ. ಈ ನಿರ್ಧಾರವು ಟೆನ್ನಿಸ್ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಇದಕ್ಕೆ ಆಮೆಲಿ ಕೂಡ ಹೊರತಾಗಿಲ್ಲ. ಚಂದದ ಪಂದ್ಯಾವಳಿಯೊಂದನ್ನು ದುಡ್ಡಿಗೋಸ್ಕರ ಕೊಲ್ಲುವ ಕೆಲಸವಾಗುತ್ತಿದೆ ಎಂದು ಲೂಕ ಪೂಯಿ ಸೇರಿದಂತೆ ಇತರ ಅಗ್ರ ಪುರುಷ ಹಾಗು ಮಹಿಳಾ ಆಟಗಾರರು ಸಹ ಟೀಕಿಸುತ್ತಿದ್ದಾರೆ. ಹೊಸ ಬಗೆಯ ಡೇವಿಸ್ ಕಪ್ನ ಮೊದಲ ಆವೃತ್ತಿಯು ಸ್ಪೈನ್ನ ಮೆಡ್ರಿಡ್ನಲ್ಲಿ ಮುಂದಿನ ನವೆಂಬರ್ ನಲ್ಲಿ ನಡೆಯಲಿದೆ. ಈ ತೀರ್ಮಾನ ಹೊರಬಿದ್ದಂತೆಯೇ, ಆಮೆಲಿಯವರು, “ಟೀವಿಯಲ್ಲಿ ಡೇವಿಸ್ ಕಪ್ ಪಂದ್ಯಗಳನ್ನು ನೋಡಿ, ರೋಮಾಂಚನಗೊಳ್ಳುತ್ತಿದ್ದ ಇಂದಿನ ಯುವ ಪೀಳಿಗೆ, ಆ ಪರಿ ಸಂತಸವನ್ನು ಇನ್ನೆಂದೂ ಅನುಭವಿಸಲಾರರು ಎಂಬುದನ್ನು ನೆನಸಿದರೆ ಬಹಳ ನೋವಾಗುತ್ತಿದೆ.” ಎಂಬ ಹೇಳಿಕೆ ನೀಡಿದ್ದರು.
ಲೂಕ ಪೂಯಿ, ಆಮೆಲಿಯೊಟ್ಟಿಗೆ ಕೆಲಸ ಮಾಡಲು ಉತ್ಸುಕರಾಗಿದ್ದು, ಟೆನ್ನಿಸ್ ಆಟದ ಅವರ ಅನುಭವವು ತನ್ನ ಏಳಿಗೆಗೆ ಬಹಳ ಸಹಕಾರಿಯಾಗುವುದು ಎಂದು ಟ್ವಿಟರ್ ನಲ್ಲಿ ತಮ್ಮ ಸಂತಸ ಹಂಚಿಕೊಂಡಿದ್ದಾರೆ.