2022 ರ ಕಾಮನ್ವೆಲ್ತ್ ಗೇಮ್ಸ್ಗೆ ಟಿ20 ಮಹಿಳಾ ಕ್ರಿಕೆಟ್ ಎಂಟ್ರಿ

Share this story



ಇನ್ನು ಮುಂದೆ ಕಾಮನ್ವೆಲ್ತ್ ಗೇಮ್ಸ್ನಲ್ಲಿಯೂ ಕ್ರಿಕೆಟ್ ಆಟದ ರಸದೌತಣ ಸವಿಯುವ ಅವಕಾಶ ಕ್ರಿಕೆಟ್ ಅಭಿಮಾನಿಗಳಿಗೆ ಸಿಗಲಿದೆ. ಅದರಲ್ಲೂ ಮಹಿಳಾ ಮಣಿಯರು ಟಿ20 ಮಾದರಿಯ ಆಟಗಳಲ್ಲಿ ಮಿಂಚಲಿದ್ದಾರೆ.
2022ರಲ್ಲಿ ಬರ್ಮಿಂಗಹ್ಯಾಂ ನಲ್ಲಿ ನಡೆಯಲಿರುವ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಅಂತಾರಾಷ್ಟ್ರೀಯ ಟಿ20 ಮಹಿಳಾ ಕ್ರಿಕೆಟ್ ಪಂದ್ಯಾವಳಿ ಸೇರಿಸುವಂತೆ ಇಂಟರನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಕಾಮನ್ವೆಲ್ತ್ ಸಂಘಟಕರಿಗೆ ತನ್ನ ಬಿಡ್ ಸಲ್ಲಿಸಿದೆ. ಸೋಮವಾರ ಐಸಿಸಿ ತನ್ನ ಪ್ರಕಟಣೆಯಲ್ಲಿ ಈ ಮಾಹಿತಿ ನೀಡಿದೆ.

ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಬೋರ್ಡ್ಗಳ (ಇಸಿಬಿ) ಪಾಲುದಾರಿಕೆಯಲ್ಲಿ ಐಸಿಸಿ ಈ ಬಿಡ್ ಸಲ್ಲಿಸಿದ್ದು, ಅರ್ಜಿ ಅಂಗೀಕೃತವಾದಲ್ಲಿ ಟಿ20 ಮಹಿಳಾ ಕ್ರಿಕೆಟ್ ಕಾಮನ್ವೆಲ್ತ್ ಆಟಗಳ ಭಾಗವಾಗಲಿದೆ. ಈ ಹಿಂದೆ 1998 ರಲ್ಲಿ ಕೌಲಾಲಂಪುರದಲ್ಲಿ ನಡೆದ ಕಾಮನ್ವೆಲ್ತ್ ಪಂದ್ಯಾವಳಿಯಲ್ಲಿ ಒಂದೇ ಒಂದು ಬಾರಿ ಕ್ರಿಕೆಟ್ ಆಯೋಜಿಸಲಾಗಿತ್ತು. ಈ ಪಂದ್ಯಾವಳಿಯನ್ನು ಸೌತ್ ಆಫ್ರಿಕಾ ತಂಡ ಗೆದ್ದುಕೊಂಡಿತ್ತು.

ಜಗತ್ತಿನಾದ್ಯಂತ ಕ್ರಿಕೆಟ್ ಆಟವನ್ನು ಜನಪ್ರಿಯಗೊಳಿಸಲು ಹಾಗೂ ಮಹಿಳೆ ಹಾಗೂ ಯುವತಿಯರ ಕ್ರೀಡಾ ಸಬಲೀಕರಣದ ದೃಷ್ಟಿಯಿಂದ 2022ರ ಕಾಮನ್ವೆಲ್ತ್ ನಲ್ಲಿ ಮಹಿಳಾ ಟಿ20 ಸೇರಿಸಲು ಅರ್ಜಿ ಸಲ್ಲಿಸಲಾಗಿದೆ. ಒಟ್ಟಾರೆಯಾಗಿ ಕ್ರೀಡಾ ಬೆಳವಣಿಗೆ ದೃಷ್ಟಿಯಿಂದ ಇದು ಮಹತ್ವದ ಹೆಜ್ಜೆಯಾಗಿದೆ ಎಂದು ಐಸಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಐಸಿಸಿಯ ಎಲ್ಲ ಸದಸ್ಯರು ಹಾಗೂ ಆಡಳಿತ ಮಂಡಳಿ ನಿರ್ದೇಶಕರು 2022ರ ಕಾಮನ್ವೆಲ್ತ್ ಕೂಟದಲ್ಲಿ ಮಹಿಳಾ ಕ್ರಿಕೆಟ್ ಸೇರಿಸುವ ಕುರಿತು ಒಮ್ಮತಾಭಿಪ್ರಾಯ ಹೊಂದಿದ್ದಾರೆ. ಎಂದೂ ಐಸಿಸಿ ಹೇಳಿದೆ.
ಎಂಟು ಟಿ20 ಮಹಿಳಾ ತಂಡಗಳು ತಲಾ ನಾಲ್ಕು ಪಂದ್ಯಗಳಂತೆ ಎರಡು ಹಂತಗಳಲ್ಲಿ ಹಾಗೂ ಒಟ್ಟಾರೆ 8 ದಿನಗಳ ಅವಧಿಯಲ್ಲಿ ಎರಡು ಸ್ಥಳಗಳಲ್ಲಿ 16 ಪಂದ್ಯಗಳನ್ನು ಆಡುವ ರೀತಿಯಲ್ಲಿ ಕಾಮನ್ವೆಲ್ತ್ ಗೇಮ್ಸ್ ಫೆಡರೇಶನ್ಗೆ ಅರ್ಜಿ ಸಲ್ಲಿಸಲಾಗಿದೆ.

ಈ ಕುರಿತು ಮಾತನಾಡಿದ ಐಸಿಸಿ ಚೀಫ್ ಎಕ್ಸೆಕ್ಯುಟಿವ್ ಡೇವಿಡ್ ರಿಚರ್ಡಸನ್, ಕ್ರಿಕೆಟ್ನ ಶ್ರೀಮಂತ ಸಂಸ್ಕೃತಿಯನ್ನು ಹೊಂದಿರುವ ಬರ್ಮಿಂಗಹ್ಯಾಂನಲ್ಲಿ ಕಾಮನ್ವೆಲ್ತ್ ಕ್ರಿಕೆಟ್ ಆರಂಭಿಸುವುದು ಅತ್ಯಂತ ಸೂಕ್ತವಾಗಿದೆ. ನಗರದ ಶೇ.23 ರಷ್ಟು ಜನತೆ ಒಂದಿಲ್ಲೊಂದು ರೀತಿಯಲ್ಲಿ ಕ್ರಿಕೆಟ್ ಆಟಕ್ಕೆ ಸಂಬಂಧಿಸಿದವರಾಗಿದ್ದಾರೆ. ಇಂಥ ಸ್ಥಳದಲ್ಲಿ ಕ್ರಿಕೆಟ್ ಆಯೋಜಿಸವುದರಿಂದ ಮಹಿಳಾ ಕ್ರಿಕೆಟ್ಗೆ ಉತ್ತೇಜನ ದೊರಕಲಿದೆ ಎಂದಿದ್ದಾರೆ.

ಎಜ್ಬಾಸ್ಟನ್, ವರ್ಸೆಸ್ಟರ್, ಡರ್ಬಿಶೈರ್ ಮುಂತಾದ ಸ್ಥಳಗಳಲ್ಲಿ ಮಹಿಳಾ ಟಿ20 ಕ್ರಿಕೆಟ್ ಪಂದ್ಯಾವಳಿಗಳು ನಡೆಯುವ ಸಾಧ್ಯತೆಗಳಿವೆ. ಕಾಮನ್ವೆಲ್ತ್ ನ ಇತರ ಎಲ್ಲ ಆಟಗಳೊಂದಿಗೆ ಬಿಬಿಸಿ ವಾಹಿನಿಯಲ್ಲಿ ಎಲ್ಲ ಕ್ರಿಕೆಟ್ ಮ್ಯಾಚ್ಗಳನ್ನು ಲೈವ್ ಆಗಿ ಬಿತ್ತರಿಸಲು ಈಗಾಗಲೇ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.

ಒಟ್ಟು ಎಂಟು ಟಿ20 ತಂಡಗಳನ್ನು ಸೂಚಿಸುವಂತೆ ಕಾಮನ್ವೆಲ್ತ್ ಸಂಘಟಕರು ಐಸಿಸಿಗೆ ಸೂಚನೆ ನೀಡಿದ್ದಾರೆ. ಈ ಮುಂಚೆ 1998 ರಲ್ಲಿ ಪ್ರಥಮ ಬಾರಿ ಕ್ರಿಕೆಟ್ ಅಳವಡಿಸಿದಾಗ ವೆಸ್ಟ್ ಇಂಡೀಸ್ ವಿಷಯದಲ್ಲಿ ಸಾಕಷ್ಟು ಗೊಂದಲಗಳುಂಟಾಗಿದ್ದವು. ವೆಸ್ಟ್ ಇಂಡೀಸ್ ಎಂಬುದು ಹಲವಾರು ದೇಶಗಳನ್ನು ಪ್ರತಿನಿಧಿಸುವುದರಿಂದ ಈ ಸಮಸ್ಯೆ ಉದ್ಭವಿಸಿತ್ತು. ಈಗ ಯಾವುದಾದರೂ ಒಂದು ವೆಸ್ಟ್ ಇಂಡೀಸ್ ದೇಶವನ್ನು ಮಾತ್ರ ನಾಮಿನೇಟ್ ಮಾಡುವಂತೆ ಸೂಚನೆ ನೀಡಲಾಗಿದೆ.

ಎಲ್ಲವೂ ಅಂದುಕೊಂಡಂತೆ ನಡೆದಲ್ಲಿ 2022ರ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಮಹಿಳಾ ಟಿ20 ಕ್ರಿಕೆಟ್ ಹಬ್ಬ ನಡೆಯುವುದು ಖಚಿತ. ಕಾಮನ್ವೆಲ್ತ್ ನಲ್ಲಿ ಕ್ರಿಕೆಟ್ ಸೇರಿಸುವುದು ನಿಜಕ್ಕೂ ಅದ್ಭುತವಾಗಿದೆ. ಇದರಿಂದ ನಾವು ಮತ್ತಷ್ಟು ಅಭಿಮಾನಿಗಳ ಸಮೂಹ ಹೊಂದಲು ಸಾಧ್ಯವಾಗಲಿದೆ. ಜೊತೆಗೆ ನಾವು ಮತ್ತಷ್ಟು ಪಂದ್ಯಗಳನ್ನು ಆಡಲು ಅವಕಾಶ ಸಿಗಲಿದ್ದು, ಜಗತ್ತಿನಾದ್ಯಂತ ಮಹಿಳಾ ಟಿ20 ಕ್ರಿಕೆಟ್ ಜನಪ್ರಿಯವಾಗಲಿದೆ ಎಂದು ಭಾರತದ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನಪ್ರೀತ್ ಕೌರ್ ಸಂತಸ ವ್ಯಕ್ತ ಪಡಿಸಿದ್ದಾರೆ.