ಇತಿಹಾಸದಲ್ಲಿ ಈವರೆಗೂ ಭಾರತ ಯಾವತ್ತೂ ಒಲಿಂಪಿಕ್ ಕ್ರೀಡೆಗಳ ಆತಿಥ್ಯ ವಹಿಸಿಲ್ಲ. ಆದರೆ ಈಗ ಸರಕಾರಿ ಒಡೆತನದ ಸಂಸ್ಥೆಯೊಂದು ಹೊಸದಿಲ್ಲಿಯ ಬಳಿ ನೂತನವಾಗಿ ನಿರ್ಮಾಣವಾಗಲಿರುವ ಜೇವಾರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಹೊಸ ಕ್ರೀಡಾ ಗ್ರಾಮವೊಂದನ್ನು ಸೃಷ್ಟಿಸಲು ಮುಂದಾಗಿದೆ. ವಿಶ್ವದ ೬ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿರುವ ಭಾರತ ಒಲಿಂಪಿಕ್ನಲ್ಲಿಯೂ ದೊಡ್ಡ ಶಕ್ತಿಯಾಗಿ ಹೊರಹೊಮ್ಮುವಂತೆ ಮಾಡಲು ಈ ಸ್ಪೋರ್ಟ್ಸ್ ಸಿಟಿ ನಿರ್ಮಾಣಕ್ಕೆ ಚಿಂತನೆ ನಡೆಸಲಾಗಿದೆ.
ಮುಂದಿನ 12 ರಿಂದ 15 ವರ್ಷಗಳಲ್ಲಿ ಸಂಪೂರ್ಣವಾಗಿ ಸಿದ್ಧಗೊಳ್ಳುವಂತೆ ಈ ಕ್ರೀಡಾ ಗ್ರಾಮದ ನೀಲನಕ್ಷೆಯನ್ನು ಇತ್ತೀಚೆಗೆ ಉತ್ತರ ಪ್ರದೇಶ ಸರಕಾರಕ್ಕೆ ಅನುಮೋದನೆಗಾಗಿ ಕಳುಹಿಸಲಾಗಿದೆ. ಜೇವಾರ್ ಪಟ್ಟಣದ ಬಳಿ ದೊಡ್ಡ ಪ್ರಮಾಣದಲ್ಲಿ ಸರಕಾರಿ ಒಡೆತನದ ಹಾಗೂ ಖಾಸಗಿ ಕಂಪನಿಗಳ ಜಾಗಗಳಿದ್ದು ಇಲ್ಲಿ ಹಸಿರು ಕ್ರೀಡಾ ಗ್ರಾಮ ನಿರ್ಮಾಣ ಮಾಡುವುದು ಸೂಕ್ತವಾಗಲಿದೆ ಎನ್ನಲಾಗಿದೆ.
ನ್ಯಾಷನಲ್ ಬಿಲ್ಡಿಂಗ್ ಕನ್ಸಟ್ರಕ್ಷನ್ ಕಾರ್ಪೊರೇಷನ್ ಸಲ್ಲಿಸಿರುವ ಪ್ರಸ್ತಾವನೆಯ ಪ್ರಕಾರ, ಕ್ರೀಡಾ ಗ್ರಾಮದಲ್ಲಿ ಎಲ್ಲ ರೀತಿಯ ಕ್ರೀಡಾ ವ್ಯವಸ್ಥೆಗಳು ಹಾಗೂ 10 ಲಕ್ಷ ಜನ ಇರಬಹುದಾದಷ್ಟು ವ್ಯವಸ್ಥಿತವಾಗಿ ಯೋಜನೆ ರೂಪಿಸಲಾಗಿದೆ.
2010ರಲ್ಲಿ ಕಾಮನ್ವೆಲ್ತ್ ಗೇಮ್ಸ್ ಆಯೋಜಿಸಿದ್ದೇ ಭಾರತದಲ್ಲಿ ಕೊನೆಯ ಬಾರಿಗೆ ನಡೆದ ದೊಡ್ಡ ಪ್ರಮಾಣದ ಕ್ರೀಡಾಕೂಟವಾಗಿದೆ. ಅದಕ್ಕೂ ಮುನ್ನ ಎರಡು ಬಾರಿ ಏಶಿಯನ್ ಗೇಮ್ಸ್ ಭಾರತದಲ್ಲಿ ನಡೆದಿವೆ.
20126ರ ಯೂತ್ ಒಲಿಂಪಿಕ್ಸ್, 2030 ರ ಏಶಿಯನ್ ಗೇಮ್ಸ್ ಹಾಗೂ 2032 ರ ಒಲಿಂಪಿಕ್ ಕ್ರೀಡಾಕೂಟಗಳಿಗೆ ತಾನು ಬಿಡ್ ಮಾಡಲಿದ್ದೇನೆ ಎಂದು ಭಾರತೀಯ ಒಲಿಂಪಿಕ್ ಅಸೋಸಿಯೇಶನ್ ಈ ವರ್ಷಾರಂಭದಲ್ಲಿ ಘೋಷಣೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಸುವರ್ಣ ಚತುಷ್ಪಥ ಹೆದ್ದಾರಿಯ ಮೂಲಕ ದೆಹಲಿ, ಮುಂಬೈ, ಚೆನ್ನೈ ಹಾಗೂ ಕೋಲ್ಕತಾ ನಗರಗಳಿಗೆ ಸಂಪರ್ಕ ಸಾಧ್ಯವಾಗುವಂತೆ ನಿರ್ಮಾಣವಾಗಲಿರುವ ಸರಕು ಸಾಗಣೆ ಕಾರಿಡಾರ್ನಿಂದ 60 ಕಿಮೀ ಅಂತರದಲ್ಲಿ ಕ್ರೀಡಾ ಗ್ರಾಮ ರೂಪು ತಳೆಯಲಿದೆ. ಹತ್ತಿರದಲ್ಲೇ ಹರಿಯುವ ಯಮುನಾ ನದಿಯಲ್ಲಿ ಜಲ ಕ್ರೀಡೆಗಳಿಗೆ ಸಂಬಂಧಿಸಿದ ತರಬೇತಿ ಹಾಗೂ ಇನ್ನಿತರ ಎಲ್ಲ ಆಧುನಿಕ ವ್ಯವಸ್ಥೆಗಳನ್ನು ಮಾಡಲು ಯೋಜಿಸಲಾಗಿದೆ. ನಿಯೋಜಿತ ಕ್ರೀಡಾ ಗ್ರಾಮ ವಿಶ್ವ ಪ್ರಸಿದ್ಧ ತಾಜ್ ಮಹಲ್ಗೆ ಕೂಡ ಅತಿ ಸನಿಹದಲ್ಲಿ ಇರಲಿರುವುದರಿಂದ ಪ್ರವಾಸೋದ್ಯಮಕ್ಕೂ ದೊಡ್ಡ ಕೊಡುಗೆ ನೀಡಲಿದೆ.
ಈಗಾಗಲೇ ವಿಮಾನ ನಿಲ್ದಾಣದ ಕಾಮಗಾರಿ ಆರಂಭವಾಗಿರುವುದರಿಂದ ಹೊಸ ನಗರ ನಿರ್ಮಾಣದ ಯೋಜನೆ ತಯಾರಿಸಲು ಇದು ಸೂಕ್ತ ಸಮಯವಾಗಿದೆ. 6 ಲೇನ್ಗಳ ಯಮುನಾ ಎಕ್ಸಪ್ರೆಸ್ ವೇ ಹಾಗೂ ಈಸ್ಟರ್ನ್ ಪೆರಿಫೆರಲ್ ಎಕ್ಸಪ್ರೆಸ್ವೇಗಳು ಪಕ್ಕದಲ್ಲೇ ಇರುವುದರಿಂದ ನಿಯೋಜಿತ ಸ್ಥಳ ಅತ್ಯಂತ ಪ್ರಶಸ್ತವಾಗಿದೆ. ಇನ್ನು ಜೇವಾರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾರಣದಿಂದ ಈ ಭಾಗದಲ್ಲಿ ವ್ಯಾಪಾರ ವಹಿವಾಟು ಬೃಹತ್ತಾಗಿ ಬೆಳೆಯಲಿದ್ದು, ವಿಶ್ವ ದರ್ಜೆಯ ಹೋಟೆಲ್ಗಳು ಹಾಗೂ ಇನ್ನಿತರ ಮೂಲಭೂತ ಸೌಕರ್ಯಗಳು ಅಭಿವೃದ್ಧಿ ಹೊಂದಲಿವೆ ಎಂದು ಈ ಬಗ್ಗೆ ಕೇಂದ್ರ ಸರಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಮೊದಲ ಹಂತದಲ್ಲಿ ಮೂಲಭೂತ ನಿರ್ಮಾಣ ವ್ಯವಸ್ಥೆಗೆ ಆದ್ಯತೆ ನೀಡಲಾಗುವುದು. ಅವಶ್ಯಕವಿರುವ ಒಟ್ಟು ಬಂಡವಾಳದ ಶೇ.10 ರಿಂದ 15 ರಷ್ಟು ಸರಕಾರ ಹಾಗೂ ಇನ್ನುಳಿದ ಹಣವನ್ನು ಖಾಸಗಿ ಕಂಪನಿಗಳು ಭರಿಸಲಿವೆ. ಇದರ ನಂತರ ಯೋಜನೆಗೆ ಹೊರಗಿನಿಂದ ಯಾವುದೇ ಸಹಾಯ ಬೇಕಾಗುವುದಿಲ್ಲ. ಯೋಜನೆಯಿಂದ ಬರುವ ಆದಾಯದಿಂದ ಸುಲಭವಾಗಿ ಎಲ್ಲವನ್ನು ನಿರ್ವಹಣೆ ಮಾಡಬಹುದಾಗಿದೆ. ಇನ್ನು ಒಟ್ಟು ಜಾಗದಲ್ಲಿ ಶೇ.20 ರಷ್ಟು ಜಾಗವನ್ನು ಕೈಗಾರಿಕೆ ಹಾಗೂ ಇನ್ನಿತರ ಯೋಜನೆಗಳಿಗೆ ಮೀಸಲಿಟ್ಟು ಇವುಗಳಿಂದಲೂ ಆದಾಯ ಬರುವಂತೆ ಮಾಡಲಾಗುವುದು ಎಂದು ಕ್ರಿಯಾಯೋಜನೆಯಲ್ಲಿ ವಿವರಿಸಲಾಗಿದೆ.