ಭಾರತ ಹಾಗು ಕೆನಡಾದಲ್ಲಿ ಹಾಕಿ ಅಕಾಡೆಮಿ ತೆರೆಯಲು ತವಕಿಸುತ್ತಿರುವ ಸರ್ದಾರ್ ಸಿಂಗ್

Share this story


ಇತ್ತೀಚೆಗಷ್ಟೆ ಅಂತರರಾಷ್ಟ್ರೀಯ ಹಾಕಿಯಿಂದ ನಿವೃತ್ತಿ ಪಡೆದಿರುವ ಭಾರತ ತಂಡದ ಮಾಜಿ ನಾಯಕ ಸರ್ದಾರ್ ಸಿಂಗ್ ಹರಿಯಾಣದ ಪಂಚ್ಕುಲದಲ್ಲಿ ಹಾಕಿ ಅಕಾಡೆಮಿಯೊಂದನ್ನು ಸ್ಥಾಪಿಸಲು ಮುಂದಾಗಿದ್ದಾರೆ. ಈ ಅಕಾಡೆಮಿಯು ಬಡ ಹಳ್ಳಿ ಮಕ್ಕಳಿಗೆ ಹಾಕಿ ಕ್ರೀಡೆಯನ್ನು ಕಲಿಸಿ, ಅದರಲ್ಲೇ ಬದುಕು ಕಂಡುಕೊಳ್ಳಲು ನೆರವಾಗಲಿದೆ. ಅಲ್ಲದೆ ಅವರ ವಿದ್ಯಾಭ್ಯಾಸಕ್ಕೂ ಸಹಾಯ ಮಾಡಲಿದೆ.

೩೨ ರ ಪ್ರಾಯದ ಸರ್ದಾರ್ ಸಿಂಗ್, ಕೆನಡಾದ ವ್ಯಾಂಕೂವರ್ ನಲ್ಲಿ ಸಹ ಹಾಕಿ ಅಕಾಡೆಮಿಯೊಂದನ್ನು ತೆರೆಯಲು ಯೋಜನೆ ಸಿದ್ಧ ಪಡಿಸಿದ್ದಾರೆ. ಅದು ಸುಮಾರು ೨೦೧೯ರ ಮಧ್ಯ ಭಾಗದಲ್ಲಿ ತೆರೆಯಬಹುದು. ಅವರು ಕೆನಡಾದ ಶಾಶ್ವತ ನಿವಾಸಿಯಾಗಲು ಸಹ ಅರ್ಜಿ ಹಾಕಿದ್ದಾರೆ. ಪಂಚ್ಕುಲ ಅಕಾಡೆಮಿಗಾಗಿ ಹರಿಯಾಣ ಸರ್ಕಾರದ ಬಳಿ ಜಾಗ ಮಂಜೂರಾತಿಗಾಗಿ ಮಾತುಕತೆ ನಡೆಸುತ್ತಿದ್ದು, ಅದು ಫಲಪ್ರದವಾಗದಿದ್ದರೆ ಖಾಸಗಿ ಜಾಗವನ್ನು ಭೋಗ್ಯಕ್ಕೆ ತೆಗೆದುಕೊಳ್ಳುವುದಾಗಿ ಸರ್ದಾರ್ ತಿಳಿಸಿದ್ದಾರೆ.

ಸರ್ದಾರ್ ಅವರು, “ನಾವು ಬಡ ಹಳ್ಳಿ ಮಕ್ಕಳಿಗಾಗಿ ಎನ್.ಜಿ.ಒ ಸಹ ತೆರೆಯಲಿದ್ದೇವೆ. ನಾನೊಬ್ಬ ಕ್ರೀಡಾಪಟುವಾಗಿ ಬಹಳ ಕಷ್ಟ ನೋಡಿದ್ದೇನೆ. ಹಳ್ಳಿಗಳಲ್ಲಿ ಆಟದ ಸಾಮಗ್ರಿ ಇಲ್ಲದಿರುವುದರಿಂದ ಪ್ರತಿಭೆ ನಶಿಸಿ ಹೋಗುತ್ತಿದೆ. ಈ ಎನ್ಜಿಒ ಹಳ್ಳಿಗಳಿಗೆ ತೆರಳಿ ಪ್ರತಿಭೆಗಳನ್ನು ಗುರುತಿಸಿ, ಅವರಿಗೆ ಶಿಕ್ಷಣ ಹಾಗು ಕ್ರೀಡೆಯಲ್ಲಿ ಸಹಾಯ ಮಾಡಲಿದೆ. ವರ್ಲ್ಡ್ ಕಪ್ ಮುಗಿದ ಕೆಲ ಸಮಯದ ಬಳಿಕ ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸುತ್ತೇನೆ.” ಎಂದಿದ್ದಾರೆ.

ಆಧುನಿಕ ಹಾಕಿಯ ಅತ್ಯುತ್ತಮ ಆಟಗಾರರಲ್ಲೊಬ್ಬರಾದ ಸರ್ದಾರ್ ರನ್ನು, ಭಾರತೀಯ ಮೂಲದ ಕೆನಡಾದ ಹಾಕಿ ಕ್ರೀಡಾಳುಗಳಿಗೆ ಸಹಾಯ ಮಾಡಲು ಕೇಳಿಕೊಳ್ಳಲಾಗಿದೆ. ಬಹು ಸಂಖ್ಯೆಯಲ್ಲಿ ಭಾರತೀಯರು ಕೆನಡಾದಲ್ಲಿ ನೆಲೆಸಿದ್ದಾರೆ. “ಅಲ್ಲಿನ ತುಂಬ ಮಕ್ಕಳು ೮ ರಿಂದ ೧೦ ಕ್ಲಬ್ಗಳಲ್ಲಿ ಆಡುತ್ತಾರೆ. ಆದ್ದರಿಂದ ಅಲ್ಲಿ ಅಕಾಡೆಮಿಯೊಂದನ್ನು ತೆರೆಯಲು ಯೋಚಿಸಿದೆ. ನಾನು ಭಾರತ ಮತ್ತು ಕೆನಡ ಎರಡಕ್ಕು ಸಮಯ ನೀಡಬೇಕಾಗಿದೆ.” ಎಂದು ಸರ್ದಾರ್ ನುಡಿದಿದ್ದಾರೆ.

ಅವರು ಆಸ್ಟ್ರೇಲಿಯಾದ ಮಾಜಿ ಆಟಗಾರರಾದ ಜೇಮಿ ಡ್ವಯರ್ ಮತ್ತು ಮಾರ್ಕ್ ನೋಲ್ಸ್ ರಂತೆಯೇ, ನುರಿತ ಹಾಕಿ ಪಟುಗಳನ್ನು ಕರೆಸಿ, ಎರಡೂ ಅಕಾಡೆಮಿಗಳಲ್ಲಿ ಮಕ್ಕಳಿಗೆ ತರಬೇತಿ ನೀಡಲು ಯೋಜನೆ ರೂಪಿಸಿರುವುದಾಗಿ ಹೇಳಿದ್ದಾರೆ.

ಸರ್ದಾರ್ ಸಿಂಗ್ ರವರು ೧೯೮೬ ರಲ್ಲಿ ಹರಿಯಾಣದ ಸಿರ್ಸಾ ಜಿಲ್ಲೆಯ ಸಂತ್ ನಗರ್ ನಲ್ಲಿ ಜನಿಸಿದರು. ಅವರು ೨೦೦೩-೦೪ ನೇ ಸಾಲಿನ ಭಾರತ ಕಿರಿಯರ ಹಾಕಿ ತಂಡದ ಪೋಲೆಂಡ್ ಪ್ರವಾಸದಲ್ಲಿ ಮೊದಲ ಬಾರಿಗೆ ಆಡಿದರು. ೨೦೦೬ರಲ್ಲಿ ಪಾಕಿಸ್ತಾನದ ಎದುರು ನಡೆದ ಪಂದ್ಯದ ಮೂಲಕ ಹಿರಿಯರ ತಂಡ ಪ್ರವೇಶಿಸಿದರು. ಅವರು ಹರಿಯಾಣ ರಾಜ್ಯಕ್ಕಾಗಿ ಸಹ ಆಡುತ್ತಾರೆ. ಅವರು ಹರಿಯಾಣ ಪೊಲೀಸ್ನ ಡೆಪ್ಯುಟಿ ಸೂಪರಿಂಟೆಂಡೆಂಟ್ ಸಹ ಆಗಿದ್ದಾರೆ. ೨೦೦೫ ರಲ್ಲಿ ಆರಂಭವಾದ ಭಾರತದ ಪ್ರೆಮಿಯರ್ ಹಾಕಿ ಲೀಗ್ ನಲ್ಲಿ ಚಂಡೀಗಢ ಡೈನಮೋಸ್ ತಂಡವನ್ನು ಪ್ರತಿನಿಧಿಸಿದ್ದರು. ಮುಂದಿನ ಮೂರು ಏಡುಗಳಿಗೆ ಹೈದರಾಬಾದ್ ಸುಲ್ತಾನ್ಸ್ ಪರವಾಗಿ ನಾಯಕನಾಗಿ ಆಡಿದರು. ೨೦೧೦ ರಲ್ಲಿ ಬೆಲ್ಜಿಯಂನ ಹಾಕಿ ಲೀಗ್ ಗಾಗಿ ಆಯ್ಕೆಯಾದರು. ೨೦೧೩ ರ ಏಷ್ಯ ಕಪ್ನ ಅವರ ಅದ್ಭುತ ಆಟ ನೋಡಿ ನೆದರ್ಲ್ಯಾಂಡ್ಸ್ ನ ಕ್ಲಬ್ ಬ್ಲೋಮೆಂಡಾಲ್ ಸಹ ಅವರನ್ನು ಕರೆಸಿಕೊಂಡಿತು. ೨೦೧೬ ರ ಜುಲೈ ೧೩ರಂದು ಭಾರತ ತಂಡದ ನಾಯಕನ ಜವಾಬ್ದಾರಿಯನ್ನು ಸರ್ದಾರ್ ರಿಂದ ಶ್ರೀಜೇಶ್ ರಿಗೆ ವರ್ಗಾಯಿಸಲಾಯಿತು.

ಸರ್ದಾರ್ ಸಿಂಗ್ ಅವರು ೩೫೦ಕ್ಕೂ ಹೆಚ್ಚು ಬಾರಿ ಅಂತರರಾಷ್ಟ್ರೀಯ ಹಾಕಿಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಇಂಡೋನೇಷ್ಯದ ಜಕಾರ್ತದಲ್ಲಿ ನಡೆದ ೨೦೧೮ರ ಏಷಿಯನ್ ಗೇಮ್ಸ್ ನಲ್ಲಿ ಕಂಚಿನ ಪದಕ ಪಡೆದ ಭಾರತ ತಂಡದ ಸದಸ್ಯರಲ್ಲಿ ಇವರೂ ಒಬ್ಬರಾಗಿದ್ದರು. ೨೦೧೦ ಹಾಗು ೨೦೧೨ರ ಸುಲ್ತಾನ್ ಅಜ಼್ಲಾನ್ ಶಾ ಕಪ್ ನ “ಪ್ಲೇಯರ್ ಆಫ್ ದಿ ಟೂರ್ನಮೆಂಟ್” ಪಶಸ್ತಿ ಇವರಿಗೆ ಲಭಿಸಿದೆ. ೨೦೧೦ ರ ಸುಲ್ತಾನ್ ಅಜ಼್ಲಾನ್ ಶಾ ಕಪ್ ನಲ್ಲಿ ಭಾರತ ಹೊನ್ನಿನ ಪದಕ ಗೆದ್ದಿತ್ತು.

ಕಳೆದ ಸೆಪ್ಟಂಬರ್ ನಲ್ಲಿ ನಿವೃತ್ತಿ ಘೋಷಿಸಿದ ಅವರು, “ನಾನು ಇನ್ನೂ ಎರಡು ಏಡುಗಳಿಗೆ ಹಾಕಿ ಆಡಲು ಸಶಕ್ತನಾಗಿದ್ದೇನೆ. ಆದರೆ ಪ್ರತಿಯೊಬ್ಬರಿಗು ಬಾಳಿನಲ್ಲಿ ಮುಂದೇನು ಎಂದು ಯೋಚಿಸಲು ಸಮಯವೊಂದು ಬರುವುದು. ನನಗೆ ವೈಯಕ್ತಿಕವಾಗಿ ಹೊಸ ಕನಸುಗಳಿಗೆ ಜೀವ ಕೊಡಲು ಆ ಸಮಯ ಈಗ ಕೂಡಿ ಬಂದಿದೆ ಎನಿಸುತ್ತಿದೆ.” ಎಂದು ಹೇಳಿದರು.

ಅವರ ಕನಸು ನನಸಾಗಿ, ಭಾರತದ ಕೀರ್ತಿ ನೂರ್ಮಡಿಯಾಗಲಿ.