ಢಾಕಾ: ಭಾರತದ ಖ್ಯಾತ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾಗೆ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಕ್ರಿಕೆಟಿಗ ಸಬ್ಬೀರ್ ರೆಹಮಾನ್ ಗೆ ಮತ್ತೆ 6 ತಿಂಗಳ ನಿಷೇಧ ಹೇರಿ ಬಾಂಗ್ಲಾದೇಶ ಕ್ರಿಕೆಟ್ ಸಂಸ್ಥೆ ಆದೇಶ ಹೊರಡಿಸಿದೆ.
ಈ ಬಗ್ಗೆ ಬಾಂಗ್ಲಾ ಕ್ರಿಕೆಟ್ ಸಂಸ್ಥೆಯ ಶಿಸ್ತು ಪಾಲನಾ ಸಮಿತಿ ಆದೇಶ ನೀಡಿದ್ದು, ಸಬ್ಬೀರ್ ರೆಹಮಾನ್ ಗೆ 6 ತಿಂಗಳ ಕಾಲ ನಿಷೇಧ ಹೇರಿದೆ. ಈ ಹಿಂದೆ ಖಾಸಗಿ ಹೊಟೆಲ್ ಗೆ ಅನುಮತಿ ಇಲ್ಲದೇ ಮಹಿಳೆಯನ್ನು ಕರೆತಂದು ಕೊಠಡಿಯೊಳಗೆ ಇರಿಸಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಸಬ್ಬೀರ್ ರೆಹಮಾನ್ 6 ತಿಂಗಳ ನಿಷೇಧ ಶಿಕ್ಷೆಗೆ ಒಳಗಾಗಿದ್ದರು. ಈ ಶಿಕ್ಷೆಯೇ ಇನ್ನೂ ಪೂರ್ಣಗೊಂಡಿಲ್ಲ. ಅಷ್ಟರಲ್ಲಾಗಲೇ ಮತ್ತೆ ಸಬ್ಬೀರ್ ನಿಷೇಧ ಶಿಕ್ಷೆಗೆ ಗುರಿಯಾಗಿದ್ದಾರೆ.
ಮೈದಾನದ ಹೊರಗಿನ ವಿವಾದಗಳಿಂದಲೇ ಭಾರಿ ಸುದ್ದಿಗೆ ಗ್ರಾಸವಾಗಿದ್ದ ಬಾಂಗ್ಲಾದೇಶದ ಕ್ರಿಕೆಟಿಗರಾದ ಸಬ್ಬೀರ್ ರೆಹಮಾಮ್ ಮತ್ತು ಮೊಸದೆಕ್ ಹುಸೇನ್ ರಿಂದಾಗಿ ಬಾಂಗ್ಲಾದೇಶ ಕ್ರಿಕೆಟ್ ಸಂಸ್ಥೆ ತೀವ್ರ ಮುಜುಗರಕ್ಕೀಡಾಗಿತ್ತು. ಈ ಸಂಬಂಧ ವಿಚಾರಣೆಗಾಗಿ ಬಾಂಗ್ಲಾ ಕ್ರಿಕೆಟ್ ಸಂಸ್ಥೆ ಶಿಸ್ತು ಪಾಲನಾ ಸಮಿತಿ ನೇಮಕ ಮಾಡಿತ್ತು. ಇದೀಗ ಈ ಸಮಿತಿ ತನ್ನ ವಿಚಾರಣೆ ಪೂರ್ಣಗೊಳಿಸಿದ್ದು, ಇಬ್ಬರ ಪೈಕಿ ಸಬ್ಬೀರ್ ರೆಹಮಾನ್ ವಿರುದ್ಧ ಶಿಕ್ಷೆ ಪ್ರಕಟಿಸಿದೆ. ಸಬ್ಬೀರ್ ರೆಹಮಾನ್ ವಿರುದ್ಧ 2 ಆರೋಪಗಳಿಗೆ ಸಂಬಂಧಿಸಿದಂತೆ ಶಿಸ್ತು ಪಾಲನಾ ಸಮಿತಿ ಶಿಕ್ಷೆ ಪ್ರಕಟಿಸಿದ್ದು, ಇದರಲ್ಲಿ ಸಾನಿಯಾ ಮಿರ್ಜಾಗೆ ಕಿರುಕುಳ ನೀಡಿದ ಪ್ರಕರಣ ಕೂಡ ಸೇರಿದೆ ಎನ್ನಲಾಗಿದೆ.
ಇನ್ನು ಮತ್ತೋರ್ವ ಆಟಗಾರ ಮೊಸದೆಕ್ ಹುಸೇನ್ ವಿರುದ್ಧ ಸಮಿತಿ ಯಾವುದೇ ರೀತಿಯ ನಿರ್ಣಯ ಕೈಗೊಂಡಿಲ್ಲ. ಹುಸೇನ್ ತನ್ನ ಪತ್ನಿಯಿಂದ 10 ಲಕ್ಷ ರೂ ವರದಕ್ಷಿಣೆ ನೀಡುವಂತೆ ಕಿರುಕುಳ ನೀಡಿದ್ದರು ಎಂದು ಪತ್ನಿ ದೂರು ನೀಡಿದ್ದರು. ಈ ಸಂಬಂಧ ಪೊಲೀಸ್ ತನಿಖೆ ಪ್ರಗತಿಯಲ್ಲಿರುವುದರಿಂದ ಶಿಸ್ತು ಪಾಲನಾ ಸಮಿತಿ ನಿರ್ಣಯ ಕೈಗೊಂಡಿಲ್ಲ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಬಿಸಿಬಿ ನಿರ್ದೇಶಕ ಇಸ್ಮಾಯಿಲ್ ಹೈದರ್ ಅವರು, ಸಬ್ಬೀರ್ ರೆಹಮಾನ್ ವಿರುದ್ಧ ಕೇಳಿ ಬಂದಿರುವ ಆರೋಪಗಳಿಗೆ ಸಂಬಂಧಿಸಿದಂತೆ ಆರು ತಿಂಗಳ ನಿಷೇಧ ಹೇರುವಂತೆ ಶಿಸ್ತುಪಾಲನಾ ಸಮಿತಿ ಶಿಫಾರಸ್ಸು ಮಾಡಿದೆ. ಹೀಗಾಗಿ ಸಬ್ಬೀರ್ ರೆಹಮಾನ್ ವಿರುದ್ಥ 6 ತಿಂಗಳ ನಿಷೇಧ ಹೇರಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಈ ಹಿಂದಿನ ನಿಷೇಧ ಶಿಕ್ಷೆಯ ಅನ್ವಯ ಆತನಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿಷೇಧ ಹೇರಲಾಗಿತ್ತು. ಆದರೆ ದೇಶಿ ಕ್ರಿಕೆಟ್ ಅಡಬಹುದಿತ್ತು. ಆದರೆ ಸಬ್ಬೀರ್ ರೆಹಮಾನ್ ತಮ್ಮ ಫೇಸ್ ಬುಕ್ ಪೋಸ್ಟ್ ಕುರಿತಂತೆ ಸ್ಪಷ್ಟನೆ ನೀಡಿದ್ದು, ನನ್ನ ಖಾತೆ ಹ್ಯಾಕ್ ಮಾಡಲಾಗಿದೆ ಎಂದು ಹೇಳಿದ್ದಾರೆ. ಹೀಗಾಗಿ ಈ ಬಗ್ಗೆ ಪರಿಶೀಲನೆಯ ಅಗತ್ಯವಿತ್ತಾದರೂ, ತಾಂತ್ರಿಕವಾಗಿ ಇದು ಸಾಧ್ಯವಿಲ್ಲ. ಈ ಹಿಂದೆಯೂ ಕೂಡ ಸಬ್ಬೀರ್ ರೆಹಮಾನ್ ಅಭಿಮಾನಿ ಮೇಲೆ ಹಲ್ಲೆ ಮಾಡಿ ಸುದ್ದಿಯಾಗಿದ್ದರು. ಹೀಗಾಗಿ ಮತ್ತೆ ಇಂತಹುದೇ ಘಟನೆ ಮುಂದುವರೆದರೆ ದೀರ್ಘಕಾಲದ ನಿಷೇಧ ಹೇರುವ ಕುರಿತು ಎಚ್ಚರಿಕೆ ನೀಡಲಾಗಿದೆ ಎಂದು ಹೈದರ್ ಮಾಹಿತಿ ನೀಡಿದರು.