೨೦೧೮ ರ ಗಾಲ್ಫ್ ಯುರೋಪಿಯನ್ ಟೂರ್ ನ ಅತ್ಯುತ್ತಮ ಆಟಗಾರನಾಗಿ ಫ್ರಾನ್ಚೆಸ್ಕೊ ಮೊಲಿನಾರಿ ಆಯ್ಕೆ

Share this story



ಫ್ರಾನ್ಚೆಸ್ಕೊ ಮೊಲಿನಾರಿ ಯವರನ್ನು ೨೦೧೮ರ ಯುರೋಪ್ ಟೂರ್ ನ ಅತ್ಯುತ್ತಮ ಗಾಲ್ಫ್ ಕ್ರೀಡಾಪಟು ಎಂದು ಆಯ್ಕೆ ಮಾಡಲಾಗಿದೆ. ಪ್ಯಾರಿಸ್ನಿಂದ ಹೊರಗೆ ನಡೆದ ರೈಡರ್ ಕಪ್ನಲ್ಲಿ ಅಮೆರಿಕದ ವಿರುದ್ಧ ಆಡಿದ ಐದೂ ಪಂದ್ಯಗಳನ್ನು ಗೆದ್ದು ಐದು ಅಂಕ ಗಳಿಸಿದ ಮೊಟ್ಟ ಮೊದಲ ಯುರೋಪಿನ ಆಟಗಾರ ಇವರಾಗಿದ್ದಾರೆ. ಗಾಲ್ಫ್ ದಂತಕತೆ ಟೈಗರ್ ವುಡ್ಸ್, ಜಾರ್ಡನ್ ಸ್ಪೀತ್ ಹಾಗು ರೋರಿ ಮೆಕೆಲ್ರಾಯ್ ರಂತ ದಿಗ್ಗಜರ ನಡುವೆಯೂ, ತನ್ನ ಸ್ಥಿರ ಪ್ರದರ್ಶನದ ಮೂಲಕ ರೈಡರ್ ಕಪ್ ಗೆದ್ದದ್ದು ಕಡಿಮೆ ಸಾಧನೆ ಏನಲ್ಲ.

೧೯೮೨ ನವಂಬರ್ ೮ ರಂದು ಜನಿಸಿದ ಫ್ರಾನ್ಚೆಸ್ಕೊ ಮೊಲಿನಾರಿ, ಇಟಲಿ ದೇಶದ ವೃತ್ತಿಪರ ಗಾಲ್ಫ್ ಆಟಗಾರರಾಗಿದ್ದಾರೆ. ೨೦೦೪ ರಲ್ಲಿ, ಇಟಲಿಯ ಹವ್ಯಾಸಿ ಸ್ಟ್ರೋಕ್ ಪ್ಲೇ ಚಾಂಪಿಯನ್ಶಿಪ್ ನ್ನು ಎರಡು ಬಾರಿ ಗೆದ್ದಿರುವರು. ಅಲ್ಲದೆ, ಇಟಾಲಿಯನ್ ಮ್ಯಾಚ್ ಪ್ಲೇ ಚಾಂಪಿಯನ್ಶಿಪ್ ನ್ನು ಸಹ ಗೆದ್ದಿದ್ದಾರೆ. ನಂತರ ಅದೇ ಏಡಿನಲ್ಲಿ, ವೃತ್ತಿಪರ ಆಟಗಾರರಾದರು.

ಮೇ ೨೦೦೬ ರಲ್ಲಿ ಯುರೋಪಿಯನ್ ಟೂರ್ ನ ಭಾಗವಾದ ಟೆಲಿಕಾಮ್ ಇಟಾಲಿಯನ್ ಓಪನ್ ಗೆಲ್ಲುವ ಮೂಲಕ, ೧೯೮೦ರ ನಂತರ ಇದೇ ಕಪ್ ಗೆದ್ದ ಮೊದಲ ಇಟಾಲಿಯನ್ ಎನಿಸಿಕೊಂಡರು. ೧೯೮೦ರಲ್ಲಿ ಇಟಲಿಯ ಮ್ಯಾಸಿಮೊ ಮಾನೆಲ್ಲಿ ಈ ಕಪ್ ಗೆದ್ದಿದ್ದರು. ಮೊಲಿನಾರಿ ೨೦೦೭ ರಿಂದ ೨೦೦೯ ರವರೆಗೆ ಯಾವುದೇ ಪಂದ್ಯಾವಳಿಯನ್ನು ಗೆಲ್ಲಲಿಲ್ಲ. ಆದರೆ, ಅದೇ ಹೊತ್ತಿನಲ್ಲಿ ೨೦ ಬಾರಿ ಟಾಪ್ ೧೦ ರ ಒಳಗೆ ಉಳಿದ ಸಾಧನೆ ಮಾಡಿದರು. ಅದರಲ್ಲಿ ೩ ಬಾರಿ ರನ್ನರ್ ಅಪ್ ಸಹ ಆದರು. ಅಕ್ಟೋಬರ್ ೨೦೦೯ರಲ್ಲಿ, ಮೊಲಿನಾರಿಯವರು ಅಧಿಕೃತ ವಿಶ್ವ ಗಾಲ್ಫ್ ರ್ಯಾಂಕಿಂಗ್ನ ಟಾಪ್ ೫೦ ರಲ್ಲಿ ಮೊದಲ ಬಾರಿಗೆ ಸ್ಥಾನ ಪಡೆದರು. ಅದೇ ಏಡಿನ ನವಂಬರ್ ನಲ್ಲಿ ತಮ್ಮ ಅಣ್ಣ ಎಡುವರ್ಡೊ ಜೊತೆಗೂಡಿ, ಒಮೇಗ ಮಿಷನ್ ಹಿಲ್ಸ್ ನಲ್ಲಿ ನಡೆದ ವರ್ಲ್ಡ್ ಕಪ್ ನಲ್ಲಿ ಚೀನಾ ದೇಶವನ್ನು ಮಣಿಸಿ, ಇಟಲಿಗೆ ಮೊದಲ ವರ್ಲ್ಡ್ ಕಪ್ ಗೆಲ್ಲಿಸಿಕೊಟ್ಟ ಕೀರ್ತಿಗೆ ಪಾತ್ರರಾದರು.

೨೦೧೦ ರಲ್ಲಿ ಚೀನಾದ ಶಾಂಘೈ ನಲ್ಲಿ ನಡೆದ ಎಚ್ ಎಸ್ ಬಿ ಸಿ ಚಾಂಪಿಯನ್ಸ್ ಕಪ್ ಗೆಲ್ಲುವ ಮೂಲಕ ವಿಶ್ವ ರ್ಯಾಂಕಿಂಗ್ ನಲ್ಲಿ ೧೪ನೇ ಜಾಗಕ್ಕೆ ಏರಿದರು. ೨೦೧೧ ರಲ್ಲಿ, ಸ್ಥಿರ ಪ್ರದರ್ಶನ ನೀಡಿದರೂ ಯಾವುದೇ ಕಪ್ ಗೆಲ್ಲಲಿಲ್ಲ. ಏಳು ಬಾರಿ ಟಾಪ್ ೧೦ ರಲ್ಲಿ ಸ್ಥಾನ ಗಿಟ್ಟಿಸಿ, ಏಡಿನ ಕೊನೆಗೆ ೨೧ನೇ ರ್ಯಾಂಕ್ ಗೆ ತೃಪ್ತಿ ಪಟ್ಟುಕೊಂಡರು. ೨೦೧೨ ರಲ್ಲಿ ಎಸ್ಪಾನ ಓಪನ್ ಗೆದ್ದರು. ಅಲ್ಲದೆ, ಜುಲೈನಲ್ಲಿ ಸ್ಕಾಟಿಶ್ ಓಪನ್ ನಲ್ಲಿ ಭಾರತೀಯ ಗಾಲ್ಫರ್ ಜೀವ್ ಮಿಲ್ಖಾ ಸಿಂಗ್ ರಿಂದ ಸೋಲನ್ನು ಅನುಭವಿಸಿದರು.

೨೦೧೩ ಹಾಗು ೨೦೧೪ ರಲ್ಲಿ ಯಾವುದೇ ಮಹತ್ವದ ಪಂದ್ಯಾವಳಿಯನ್ನು ಮೊಲಿನಾರಿ ಗೆಲ್ಲಲಿಲ್ಲ. ೨೦೧೬ ರಲ್ಲಿ ತಮ್ಮದೇ ದೇಶದಲ್ಲಿ ನಡೆದ ಇಟಾಲಿಯನ್ ಓಪನ್ ಎರಡು ಬಾರಿ ಗೆದ್ದು, ಈ ಸಾಧನೆ ಮಾಡಿದ ಮೊದಲ ಇಟಾಲಿಯನ್ ಎನಿಸಿದರು.

೨೦೧೮ ರಲ್ಲಿ ಸ್ಕಾಟ್ಲೆಂಡ್ ನಲ್ಲಿ ನಡೆದ ಚಾಂಪಿಯನ್ಶಿಪ್ ನಲ್ಲಿ ಟೈಗರ್ ವುಡ್ಸ್ ಜೊತೆಗಾರನಾಗಿ ಫೈನಲ್ಸ್ ಗೆದ್ದು ವಿಶ್ವ ರ್ಯಾಂಕಿಂಗ್ ನಲ್ಲಿ ೬ ನೇ ಸ್ಥಾನಕ್ಕೆ ಏರಿದರು. ಇದು ಅವರ ಗಾಲ್ಫ್ ವೃತ್ತಿ ಬದುಕಿನ ಅತ್ಯಂತ ಉತ್ಕೃಷ್ಟ ರ್ಯಾಂಕಿಂಗ್ ಆಗಿದೆ.

ಫ್ರಾನ್ಚೆಸ್ಕೊ ಮೊಲಿನಾರಿ ಲಂಡನ್ ನಲ್ಲಿ ವಾಸವಿದ್ದಾರೆ. ಅವರು ವ್ಯಾಲೆಂಟಿನ ರನ್ನು ೨೦೦೭ ರಲ್ಲಿ ಮದುವೆಯಾದರು. ಅವರಿಗೆ ಟೊಮಾಸೊ ಮತ್ತು ಎಮ್ಮ ಎಂಬ ಇಬ್ಬರು ಮಕ್ಕಳಿದ್ದಾರೆ. ಡೆನಿಸ್ ಪ್ಯು, ಮೊಲಿನಾರಿಯ ಬಹು ಕಾಲದ ತರಬೇತುದಾರರಾಗಿದ್ದಾರೆ. ಇತ್ತೀಚೆಗೆ ಡೇವ್ ಆಲ್ರೆಡ್ ಅವರನ್ನೂ ಕೋಚಿಂಗ್ ತಂಡಕ್ಕೆ ಸೇರಿಸಿಕೊಂಡಿದ್ದಾರೆ. ಆಂಗ್ಲ, ಇಟಾಲಿಯನ್ ಹಾಗು ಸ್ಪ್ಯಾನಿಶ್ ಭಾಷೆಗಳನ್ನು ಬಲ್ಲವರಾಗಿದ್ದಾರೆ. ಬಿಡುವಿನ ವೇಳೆಯಲ್ಲಿ ಮೊಲಿನಾರಿಯವರು, ತಮ್ಮ ಹೆಂಡತಿ ಮಕ್ಕಳೊಂದಿಗೆ ಲಂಡನ್ನಿನ ಸಾಂಸ್ಕೃತಿಕ ತಾಣಗಳಿಗೆ ಭೇಟಿ ನೀಡಲು ಇಷ್ಟ ಪಡುತ್ತಾರೆ. ಅವರು ಕಾಲ್ಚೆಂಡು ಕ್ರೀಡೆಯನ್ನು ಸಹ ಬಹಳವಾಗಿ ಮೆಚ್ಚುತ್ತಾರೆ.

ಕಾರ್ನೌಸ್ಟಿಯಲ್ಲಿ ನಡೆದ ಗಾಲ್ಫ್ ನ ಮೇಜರ್ ಚಾಂಪಿಯನ್ಶಿಪ್ ಗೆಲ್ಲುವ ಮೂಲಕ ಮೊಲಿನಾರಿ, ಈ ಸಾಧನೆ ಮಾಡಿದ ಮೊಟ್ಟ ಮೊದಲ ಇಟಾಲಿಯನ್ ಎನಿಸಿಕೊಂಡಿದ್ದಾರೆ. ಅವರು ಇಟಲಿಯ ಮತ್ತೊಬ್ಬ ಯಶಸ್ವಿ ಗಾಲ್ಫರ್ ಕಾನ್ಸ್ಟಾಂಟಿನೊ ರೋಕ ರ ಐದು ಯುರೋಪಿಯನ್ ಟೂರ್ ಗೆದ್ದ ಸಾಧನೆಯನ್ನು ಹಿಂದಿಕ್ಕಿ, ಇಟಲಿಯ ಕ್ರೀಡಾ ಕ್ಷೇತ್ರದಲ್ಲಿ, ತಮ್ಮ ಹೆಸರನ್ನು ಭದ್ರ ಪಡಿಸಿದ್ದಾರೆ. ಅವರು ಇಟಾಲಿಯನ್ ಗಾಲ್ಫ್ ನ ದಂತಕತೆಯಾಗುವರು ಎಂದು ಹಲವರು ಈಗಾಗಲೆ ಭವಿಷ್ಯ ನುಡಿದಿದ್ದಾರೆ.